ಕೃಷಿಯ ಅನೇಕ ನೈಸರ್ಗಿಕ ಸಂಪನ್ಮೂಲಗಳಾದ ಗಾಳಿ, ನೀರು ಮತ್ತು ಸೂರ್ಯರಷ್ಮಿಯ ಜೊತೆಗೆ ಮಣ್ಣು ಒಂದಾಗಿದೆ. ವ್ಯವಸಾಯಕ್ಕೆ ಮಣ್ಣು ಮೂಲ ಆಧಾರ. ಯಾವುದೆ ಒಂದು ದೇಶ ಅಥವಾ ಪ್ರದೇಶದ ಸಮಗ್ರ ಬೆಳವಣಿಗೆಯಲ್ಲಿ ಕೃಷಿ ಒಂದು ಮಹತ್ವದ ಪಾತ್ರ ವಹಿಸುತ್ತದೆ. ಬೆಳೆಯು ಎಂತಹ ಅತಿ ಹೆಚ್ಚು ಇಳುವರಿ ಕೊಡುವ ತಳಿ ಇದ್ದರೂ ಮತ್ತು ಸಾಕಷ್ಟು ನೀರಿನ ಸೌಲಭ್ಯವಿದ್ದರೂ ಫಲವತ್ತಾದ ಆರೋಗ್ಯಕರ ಮಣ್ಣು ಇರದಿದ್ದರೆ ಏನೂ ಉಪಯೋಗವಿಲ್ಲ.
ಮಣ್ಣು ಪರೀಕ್ಷೆಯ ಮಹತ್ವ:
1.ಮಣ್ಣು ಪರೀಕ್ಷೆಯಿಂದ ಮಣ್ಣಿನ ಗುಣಧರ್ಮ ಹಾಗೂ ಫಲವತ್ತತೆ ತಿಳಿಯುತ್ತದೆ.
2.ಮಣ್ಣು ಪರೀಕ್ಷೆಯಿಂದ ಮಣ್ಣಿನ ರಸಸಾರ, ಲವಣಾಂಶ ಸಾವಯವ ಇಂಗಾಲ, ದೊರೆಯುವ ರಂಜಕ, ದೊರೆಯುವ ಪೊಟ್ಯಾಶ್ ಹಾಗು ಲಘು ಪೋಷಕಾಂಶಗಳ ಮಟ್ಟ ತಿಳಿಯುತ್ತದೆ.
ಮಣ್ಣು ಮಾದರಿ ಸಂಗ್ರಹಣೆಯಲ್ಲಿ ಮುಖ್ಯವಾದ ಅಂಶಗಳು :
1. ಮಣ್ಣು ಮಾದರಿ ತೆಗೆಯುವ ಆಳ: ಕ್ಷೇತ್ರ ಬೆಳೆಗಳಿಗೆ 0-15/20 ಸೆಂ.ಮೀ., ತೋಟ ಬೆಳೆಗಳಾದಲ್ಲಿ 0-30 ಸೆಂ.ಮೀ.
2. 4ರಿಂದ 5 ಉಪಮಾದರಿಗಳನ್ನು ಒಂದು ಎಕರೆ ಪ್ರದೇಶದಲ್ಲಿ ಭೂಮಿಯ ಗುಣಗಳಿಗೆ ಅನುಗುಣವಾಗಿ ತೆಗೆಯಬೇಕು.
3. 3 ವರ್ಷಗಳಿಗೆ ಒಮ್ಮೆ ಒಣಬೇಸಾಯದ ಬೆಳೆಗಳಿದ್ದಲ್ಲಿ ಮಾದರಿಯ ಪುನರಾವರ್ತನೆ ಮಾಡಬೇಕು.
4. ಮಣ್ಣು ಮಾದರಿಯನ್ನು ವರ್ಷದ ಯಾವುದೇ ಹಂಗಾಮಿನಲ್ಲಿ ಮಣ್ಣಿನ ತೇವಾಂಶ ಮದ್ಯಮದಲ್ಲಿದ್ದಾಗ ತೆಗೆಯಬಹುದು. ಆದರೆ ಮಳೆ ಬೀಳುವ ಮುನ್ನ ಅಥವಾ ಬೆಳೆ ಕಟಾವು ಆದ ನಂತರ ಮಣ್ಣು ಮಾದರಿ ಸಂಗ್ರಹಿಸುವುದು ಹೆಚ್ಚು ಸೂಕ್ತ.
5. ಬೆಳೆ ಇದ್ದಾಗ ಎರಡು ಸಾಲುಗಳ ಮಧ್ಯ ಭಾಗದಲ್ಲಿ ಮಣ್ಣು ಮಾದರಿ ತೆಗೆಯಬೇಕು.
ನಿಯಮಾನುಸಾರ ಮಣ್ಣು ಮಾದರಿ ತೆಗೆಯುವ ವಿಧಾನ :
1. ಜಮೀನಿನ ಮೇಲ್ಮೈ ಲಕ್ಷಣಗಳು ಹಾಗೂ ವ್ಯತ್ಯಾಸಗಳಿಗನುಗುಣವಾಗಿ ಜಮೀನನ್ನು ವಿಂಗಡಿಸಬೇಕು.
2.ಪ್ರತಿ ವಿಂಗಡಿಸಿದ ಕ್ಷೇತ್ರದಿಂದ ಕನಿಷ್ಠ 4-5 ಮಾದರಿಗಳನ್ನು ತೆಗೆದು ಸೇರಿಸಿ ಆ ಸಂಯುಕ್ತ ಮಾದರಿಯಿಂದ ಅರ್ಧ ಕೆ.ಜಿ. ಮಾದರಿಯನ್ನು ವಿಷ್ಲೇಶಣೆಗಾಗಿ ತೆಗೆದುಕೊಳಬೇಕು.
3.ಪ್ರತಿ ಉಪಮಾದರಿ ತೆಗೆಯುವಾಗ V ಆಕಾರದ ಗುಂಡಿಯನ್ನು 6 ರಿಂದ 9 ಅಂಗುಲ ಆಳದವರೆಗೆ ತೆಗೆದು ಗುಣಿಯ ಒಂದು ಗೋಡೆಯ ಭಾಗದಿಂದ ಇಳಿಜಾರಿನಲ್ಲಿ ಮೇಲಿನಿಂದ ಕೆಳಗಿನವರೆಗೂ 1 ಇಂಚು ದಪ್ಪದ ಮಣ್ಣನ್ನು ತೆಗೆಯಬೇಕು.
4.ಮಣ್ಣಿನ ಮಾದರಿ ಹಸಿಯಾಗಿದ್ದರೆ ನೆರಳಿನಲ್ಲಿ ಒಣಗಿಸಬೇಕು.
5.ಈ ರೀತಿ ಸಂಗ್ರಹಿಸಿದ ಮಣ್ಣನ್ನು ಸ್ವಚ್ಚವಾದ ಪ್ಲಾಸ್ಟಿಕ್ ಹಾಳೆಯ ಮೇಲೆ ಹರಡಿ ಕಸಕಡ್ಡಿ ಹಾಗೂ ಕಲ್ಲುಗಳನ್ನು ಆಯ್ದು ತೆಗೆದು ಮಿಶ್ರ ಮಾಡಬೇಕು. ನಂತರ 4 ಭಾಗ ಮಾಡಿ ಯಾವುದೇ ಎದುರು ಬದುರಿನ ಭಾಗ ಬಿಡಬೇಕು. ಉಳಿದ ಎರಡು ಭಾಗವನ್ನು ಕೂಡಿಸಿ ಮಿಶ್ರ ಮಾಡಬೇಕು. ಈ ವಿಧಾನದಿಂದ ಅರ್ಧ ಕಿ.ಗ್ರಾಂ. ಉಳಿಸಿಕೊಳಬೇಕು.
ಮಣ್ಣು ಮಾದರಿ ಸಂಗ್ರಹಿಸುವಾಗ ಗಮನಿಸಬೇಕಾದ ಅಂಶಗಳು :
ಮಣ್ಣಿನ ಮಾದರಿಯನ್ನು ತಿಪ್ಪೆ ಗುಂಡಿಯ ಪಕ್ಕ, ರಸ್ತೆ ಪಕ್ಕ, ನೀರಿನ ಕಾಲುವೆಯ ಪಕ್ಕ, ಹೊಲದ ಬೇಲಿ ಮತ್ತು ಬದುಗಳ ಪಕ್ಕ, ಮರದ ಕೆಳಗೆ, ಮನೆಯ ಪಕ್ಕ, ಬಾವಿ ಹಾಗೂ ದನಗಳನ್ನು ಕಟ್ಟುವ ಸ್ಥಳದ ಹತ್ತಿರ, ಹೊಸದಾಗಿ ರಸಗೊಬ್ಬರ, ಸಾವಯವ ಗೊಬ್ಬರ ಹಾಕಿದ ಜಮೀನಿನಿಂದ ಮಾದರಿಯನ್ನು ಸಂಗ್ರಹಿಸಬಾರದು.