Sunday, April 20, 2025

Yellow watermelon-ಹಳದಿ ಬಣ್ಣದ ಕಲ್ಲಂಗಡಿ ಬೆಳೆದು ತೋರಿಸಿದ ಧಾರವಾಡದ ರೈತ..! ಹೊಸ ತಳಿಯ ಹಣ್ಣಿನಿಂದ ದುಪ್ಪಟ್ಟು ಲಾಭ!

ನಮಸ್ಕಾರ ರೈತರೇ, ಸದ್ಯ ಬಿಸಿಲ ಬೇಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ವೇಳೆ ಜನರು  ಹೆಚ್ಚಾಗಿ ಕಲ್ಲಂಗಡಿ ಹಣ್ಣು ತಿನ್ನಲು ಬಯಸುತ್ತಾರೆ. ಕಲ್ಲಂಗಡಿ ಹಣ್ಣು ಎಂದಾಕ್ಷಣ ಕೆಂಪು ಬಣ್ಣದ ಕಲ್ಲಂಗಡಿ ನಮ್ಮ ಕಣ್ಣೆದುರು ಬರುತ್ತದೆ. ಆದರೆ, ಇಲ್ಲೊಬ್ಬ ರೈತ ಹಳದಿ ಬಣ್ಣದ ಕಲ್ಲಂಗಡಿ ಹಣ್ಣನ್ನು ಬೆಳೆದು ಗಮನಸೆಳೆದಿದ್ದಾನೆ.


ಹೌದು! ಹಳದಿ ಬಣ್ಣದ ಕಲ್ಲಂಗಡಿ ಹಣ್ಣನ್ನು ತಮ್ಮ ಕೈಯಲ್ಲಿ ಹಿಡಿದು ತೋರಿಸುತ್ತಿರುವ ಈ ಯುವ ರೈತನ ಹೆಸರು ಮೈಲಾರಪ್ಪ ಗುಡ್ಡಪ್ಪನವರ. ಧಾರವಾಡ ತಾಲೂಕಿನ ಕುರುಬಗಟ್ಟಿ ಗ್ರಾಮದ ರೈತ. ತೋಟಗಾರಿಕಾ ಬೆಳೆ ಬೆಳೆಯುವುದರಲ್ಲಿ ಖುಷಿ ಕಂಡಿರುವ ಇವರು ಇದೀಗ ಹಳದಿ ಬಣ್ಣದ ಕಲ್ಲಂಗಡಿ ಬೆಳೆದು ಬೇಷ್ ಎನಿಸಿಕೊಂಡಿದ್ದಾರೆ.

ಸಹಜವಾಗಿಯೇ ಕಲ್ಲಂಗಡಿ ಹಣ್ಣು ಕಟ್ ಮಾಡಿದಾಗ ಕೆಂಪು ಬಣ್ಣವಿರುತ್ತದೆ. ಇವರು ಬೆಳೆದ ಕಲ್ಲಂಗಡಿ ಹಣ್ಣನ್ನು ಕಟ್ ಮಾಡಿದರೆ ಅದು ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿ ಮಾಡುತ್ತದೆ. ಏಕೆಂದರೆ ಇದು ಹಳ್ಳದಿ ಬಣ್ಣದ ಕಲ್ಲಂಗಡಿ. ಆವಿಷ್ಕರಿಸಿದ ತಳಿಯ ಕಲ್ಲಂಗಡಿ ಬೀಜಗಳನ್ನು ತೋಟಗಾರಿಕಾ ಇಲಾಖೆ ಅಧಿಕಾರಿಗಳಿಂದ ಪಡೆದು ತಮ್ಮ ಹೊಲದಲ್ಲಿ ಬೆಳೆದ ಮೈಲಾರಪ್ಪ ಇದೀಗ ಹಳದಿ ಬಣ್ಣದ ಕಲ್ಲಂಗಡಿಯ ಉತ್ತಮ ಫಸಲು ಪಡೆದಿದ್ದಾರೆ. ಇದರ ಜೊತೆಗೆ ಕೆಂಪು ಕಲ್ಲಂಗಡಿಯನ್ನೂ ಮೈಲಾರಪ್ಪ ಬೆಳೆದಿದ್ದಾರೆ. ಒಂದು ಎಕರೆಗೆ ಅಂದಾಜು ಒಂದು ಲಕ್ಷದಷ್ಟು ಖರ್ಚು ಮಾಡಿದರೆ ಈ ಹಣ್ಣಿನಿಂದ ಸುಮಾರು ಮೂರೂವರೆ ಲಕ್ಷ ಆದಾಯ ಗಳಿಸಬಹುದು ಎನ್ನುತ್ತಾರೆ ಮೈಲಾರಪ್ಪ.

ಒಂದು ಎಕರೆ ಕೃಷಿ ಜಮೀನಿನಲ್ಲಿ ಈ ಹಳದಿ ಬಣ್ಣದ ಕಲ್ಲಂಗಡಿಯನ್ನು ಈ ರೈತ ಬೆಳೆದಿದ್ದಾನೆ. ಕುರುಬಗಟ್ಟಿ ಹೊರತುಪಡಿಸಿದರೆ ಧಾರವಾಡ ತಾಲೂಕಿನ ಬಾಡ ಗ್ರಾಮದಲ್ಲೂ ಓರ್ವ ರೈತ ಈ ಹಳದಿ ಬಣ್ಣದ ಕಲ್ಲಂಗಡಿ ಬೆಳೆದಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಇಬ್ಬರು ರೈತರು ಈ ವಿನೂತನ ಕಲ್ಲಂಗಡಿ ಹಣ್ಣನ್ನು ಬೆಳೆದಿದ್ದಾರೆ.

ಇದನ್ನೂ ಓದಿ:ನಿಮ್ಮ ಜಮೀನಿನ ಜಂಟಿ ಪಹಣಿ ಸರಿಪಡಿಸಿಕೊಳ್ಳುವುದು ಹೇಗೆ? ತಿಳಿಯಿರಿ.

ಕಡಿಮೆ ಖರ್ಚಿನ ಮೂಲಕ ಒಂದು ಎಕರೆಯಲ್ಲಿ ಈ ಕಲ್ಲಂಗಡಿ ಬೆಳೆದಿರುವ ಈ ರೈತ ಸುಮಾರು 10-15 ಟನ್ ಕಲ್ಲಂಗಡಿ ಫಸಲು ಪಡೆದಿದ್ದಾರೆ. ಸದ್ಯಕ್ಕಂತೂ ಈ ಹಣ್ಣಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದು, ಇದರಿಂದ ಲಕ್ಷ ಲಕ್ಷ ಆದಾಯದ ನೀರಿಕ್ಷೆಯಲ್ಲಿದ್ದಾರೆ ರೈತ ಮೈಲಾರಪ್ಪ. ಬೇರೆ ದೇಶದ ತಳಿಯನ್ನು ಬೆಳೆದು ಇದೀಗ ಧಾರವಾಡದ ರೈತರೇ ಈ ರೀತಿ ಪ್ರಯತ್ನ ಮಾಡಿ ಅದರಲ್ಲಿ ಯಶಸ್ಸು ಕಂಡಿದ್ದಾರೆ.

ಹಳದಿ ಕಲ್ಲಂಗಡಿ ಬೆಳೆಯಲು ಪ್ರತಿ ಎಕರೆಗೆ 80 ಸಾವಿರದಿಂದ 1 ಲಕ್ಷ ರೂ. ಖರ್ಚಾಗುತ್ತದೆ. ಕೇವಲ 65 ದಿನಗಳ ಬೆಳೆ ಇದು. ಒಂದು ಎಕರೆಗೆ 6 ಸಾವಿರ ಸಸಿ ಬೇಕಾಗುತ್ತವೆ. ಪ್ರತಿ ಸಸಿಗೆ ರೂ. 2 ದರವಿದೆ. ಸರಕಾರದಿಂದ ಕಲ್ಲಂಗಡಿ ಬೆಳೆಯಲು ಹನಿ ನೀರಾವರಿಗಾಗಿ ರೂ. 75 ಸಾವಿರ ಸಬ್ಸಿಡಿ ಹಾಗೂ ಹೊಸ ಹೈಬ್ರಿಡ್ ಬೀಜಗಳ ಬೆಳೆಗೆ ಸರಕಾರದಿಂದ ರೂ. 8 ಸಾವಿರ ಪ್ರೋತ್ಸಾಹಧನವಿದೆ.

65 ದಿನಗಳ ಈ ಹಳದಿ ಕಲ್ಲಂಗಡಿ ಬೆಳೆಯಿಂದ ಸುಮಾರು 10 ರಿಂದ 12 ಟನ್ ಕಲ್ಲಂಗಡಿ ಹಣ್ಣು ಬರುವ ಸಾಧ್ಯತೆ ಇದ್ದು, ಮಾರುಕಟ್ಟೆಗೆ ನೇರವಾಗಿ ಮಾರಾಟ ಮಾಡುವದರಿಂದ ಅಂದಾಜು 4 ರಿಂದ 4.5 ಲಕ್ಷ ಲಾಭ ಪಡೆಯಬಹುದಾಗಿದೆ ಎಂದರು.ಉತ್ತರ-ಕರ್ನಾಟಕದ ಜಿಲ್ಲೆಗಳಲ್ಲಿಯೇ ಧಾರವಾಡದ ಇಬ್ಬರು ರೈತರು ಮಾತ್ರ ಈ ವಿಶೇಷವಾದ ಹಳದಿ ಕಲ್ಲಂಗಡಿ ಬೆಳೆ ಬೆಳೆದಿದ್ದಾರೆ. ಅವರು ಇತರ ರೈತರಿಗೆ, ಗ್ರಾಹಕರಿಗೆ ಹಳದಿ ಕಲ್ಲಂಗಡಿ ಪರಿಚಯಿಸಲು ಧಾರವಾಡ ನಗರದ ತೋಟಗಾರಿಕೆ ಇಲಾಖೆ ಹಾಗೂ ಹಳೆ ಬಸ್ ನಿಲ್ದಾಣದ ಆವರಣದಲ್ಲಿ ತಾತ್ಕಾಲಿಕ ಮಳಿಗೆ ತೆರೆದು ಮಾರಾಟ ಮಾಡಲು ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದ್ದಾರೆ.

ಹಳದಿ ಬಣ್ಣದ ಕಲ್ಲಂಗಡಿ ವಿಶೇಷತೆಗಳು:

ಹಳದಿ ಬಣ್ಣದ ಕಲ್ಲಂಗಡಿ ಬೆಳೆ: ಬೇಸಿಗೆ ಕಾಲದ ಮುಖ್ಯವಾದ ಬೆಳೆ ಎಂದರೆ ಅದು ಕಲ್ಲಂಗಡಿ ಕಾಯಿ ಹಣ್ಣಾಗುವಾಗ ಬಣ್ಣ ಹವೆಯ ವಾತಾವರಣ ಇದ್ದರೆ, ಸಕ್ಕರೆ ಅಂಶ ಹೆಚ್ಚಾಗುತ್ತದೆ. ನೀರು ಬಸಿದು ಹೋಗುವ ಮರಳು ಮಿಶ್ರಿತ ಗೋಡ್ಡು ಮಣ್ಣು ತುಂಬಾ ಉತ್ತಮ. ಹೆಚ್ಚು ಹುಳಿ ಮತ್ತು ಕ್ಷಾರದ ಮಣ್ಣು ಸೂಕ್ತವಲ್ಲ.ಈ ಹಿಂದೆ ನದಿ ತೀರದ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತಿತ್ತು. ಆದರೆ ಈಗ ಆಧುನಿಕ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಂಡು ಕರ್ನಾಟಕದ ಎಲ್ಲಾ ಪ್ರದೇಶಗಳಲ್ಲಿ ಕಲ್ಲಂಗಡಿಯನ್ನು ಬೆಳೆಯಲಾಗುತ್ತಿದೆ.

ತಳಿಗಳು: ಸದ್ಯದ ಮಾರುಕಟ್ಟೆಯಲ್ಲಿ ಐಸ್ ಬಾಕ್ಸ್ ತಳಿ ಮತ್ತು ಸಾಂಪ್ರದಾಯಕ ತಳಿಗಳು ಪ್ರಚಲಿತವಾಗಿವೆ. ಹೊಸದಾಗಿ ಮಾರುಕಟ್ಟೆಗಳಲ್ಲಿ ಹಳದಿ ಬಣ್ಣದ ತಿರುಳನ್ನು ಹೊಂದಿರುವ ತಳಿಗಳು ದೊರೆಯುತ್ತಿವೆ.
ಹಳದಿ ಬಣ್ಣದ ತಳಿಗಳು: ಲೈಕೋಪಿನ್ನ ಅಂಶ ಕಡಿಮೆ ಇರುವುದರಿಂದ ಹಳದಿ ಬಣ್ಣಕ್ಕೆ ಕಾರಣವಾಗುತ್ತದೆ. ಹಣ್ಣುಗಳು ಕೆಂಪು ಬಣ್ಣದ ಕಲ್ಲಂಗಡಿ ಹಣ್ಣಿಗಿಂತ ಸಿಹಿಯಾಗಿದ್ದು, ಏಪ್ರಿಕಾಟ್ ಹಣ್ಣನಂತಹ ಸುವಾಸನೆಯನ್ನು ಹೊಂದಿರುತ್ತವೆ.

ಹಳದಿ ಕಲ್ಲಂಗಡಿಯ ಪೌಷ್ಠಿಕಾಂಶದ ಮೌಲ್ಯ: ಕೆಂಪು ಕಲ್ಲಂಗಡಿಯಂತೆ ಆರೋಗ್ಯಕ್ಕೆ ಪ್ರಯೋಜನಗಳನ್ನು ಹೊಂದಿದೆ ವಿಟಮಿನ್ ಎ ಮತ್ತು ಸಿ, ಬೀಟಾ-ಕ್ಯಾರೋಡಿನ್ ಮತ್ತು ಪೊಟ್ಯಾಸಿಯಂ ನಂತಹ ಅಂಶಗಳ ದೇಹಕ್ಕೆ ಪ್ರತಿ ರಕ್ಷಣೆಯನ್ನು ಒದಗಿಸುತ್ತವೆ.

ಇದನ್ನೂ ಓದಿ:ಬೇಸಿಗೆ ಸಮಯದಲ್ಲಿ ತೋಟಗಾರಿಕೆ ಬೆಳೆಗಳ ರಕ್ಷಣೆ ಹೇಗೆ? ಇಲ್ಲಿದೆ ಮಾಹಿತಿ.

ವಿಟಮಿನ್ ಎ ಮತ್ತು ಸಿ: ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ಒದಗಿಸುತ್ತದೆ.
ಬೀಟಾ-ಕ್ಯಾರೋಡಿನ್: ಹಳದಿ ಕಲ್ಲಂಗಡಿಯಲ್ಲಿ ಹೇರಳವಾಗಿ ದೊರೆಯುತ್ತದೆ. ಕ್ಯಾನ್ಸರ್ ಮತ್ತು ಕಣ್ಣಿನ ಕಾಯಿಲೆಗಳಿಂದ ರಕ್ಷಿಸುತ್ತದೆ.

ಪೊಟ್ಯಾಸಿಯಂ: ರಕ್ತದೊತ್ತಡ ಮತ್ತು ನರಗಳ ಕಾರ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಹೆಚ್ಚಿನ ನೀರಿನ ಅಂಶ: ಬಿಸಿ ವಾತಾವರಣದಲ್ಲಿ ದೇಹವನ್ನು ರಿಪ್ರೇಶ್ ಆಗಿ ಇಡುತ್ತದೆ.

ಇತ್ತೀಚಿನ ಸುದ್ದಿಗಳು

Related Articles