Wednesday, December 4, 2024

Crops fertilizer deficiency-ಬೆಳೆಗಳಲ್ಲಿ ಪೋಷಕಾಂಶದ ಕೊರೆತೆಯಾದಾಗ ನಿರ್ವಹಣೆ ಹೇಗೆ ಮಾಡಬೇಕು ತಿಳಿದಿದೆಯೇ!

ಮಾನವ ಹಾಗೂ ಪ್ರಾಣಿಗಳ ಬೆಳವಣಿಗೆಗೆ ಪೋಷಣೆಯು ಅಗತ್ಯವಾದಂತೆ ಬೆಳೆಗಳ ಬೆಳವಣಿಗೆಗೂ ಪೋಷಕಾಂಶಗಳು ಅಗತ್ಯವಾಗಿವೆ. ಬೆಳೆಗಳು ಉತ್ತಮ ಗುಣಮಟ್ಟದ ಹೆಚ್ಚಿನ ಇಳುವರಿ ನೀಡಬೇಕಾದರೆ ಸಸ್ಯಗಳಿಗೆ ಪೋಷಕಾಂಶಗಳು ಅವಶ್ಯಕವಾಗಿ ಬೇಕಾಗುತ್ತದೆ.

ಇವುಗಳಲ್ಲಿ ಮುಖ್ಯ ಪೋಷಕಾಂಶಗಳು,ಪ್ರಧಾನ ಪೋಷಕಾಂಶಗಳು ಮತ್ತು ಲಘು ಪೋಷಕಾಂಶಗಳು ಇವುಗಳ ಕೊರತೆಯಿಂದ ಬೆಳೆಗಳ ಬೆಳವಣಿಗೆ ಕುಂಠಿತ ರೂಪ, ಕೊರತೆಯ ಲಕ್ಷಣ ಮತ್ತು ಹಣ್ಣುಗಳು ವಿಕಾರವಾಗುವುದು ಕಾಣಬಹುದು. ಸರಿಯಾದ ಪ್ರಮಾಣ ಹಾಗೂ ಸಕಾಲದಲ್ಲಿ ಸಸ್ಯಗಳಿಗೆ ಪೋಷಕಾಂಶಗಳನ್ನು ಒದಗಿಸಿದರೆ ರೈತರು ಇಳುವರಿಯನ್ನು ಹೆಚ್ಚಾಗಿ ಪಡೆಯಬಹುದು.

1)ಸಾರಜನಕ ಕೊರತೆ: ಕುಂಠಿತ ಬೆಳವಣಿಗೆ ಹಾಗೂ ಕೆಳಭಾಗದ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಕೊರತೆ ನೀಗಿಸಲು: ಸಾಕಷ್ಟು ಪ್ರಮಾಣದಲ್ಲಿ ಸಾವಯವ ಗೊಬ್ಬರ ಮತ್ತು ಹಸಿರೆಲೆ ಗೊಬ್ಬರ ಹಾಕಬೇಕು. ಯೂರಿಯಾ ಗೊಬ್ಬರ ಹಾಕಬೇಕು.

2)ರಂಜಕ ಕೊರತೆ:ಹುಳಿ ಮತ್ತು ಸುಣ್ಣದ ಕಲ್ಲು ಹೆಚ್ಚಾಗಿರುವಂತಹ ಮಣ್ಣಿನಲ್ಲಿ ಕಾಣಿಸುತ್ತದೆ. ಹಳೆಯ ಎಲೆಗಳು ನೇರಳೆ ಬಣ್ಣಕ್ಕೆ ತಿರುಗುತ್ತವೆ ಮತ್ತು ಸಸ್ಯದ ಬೇರು ಮತ್ತು ಸಸ್ಯದ ಬೆಳವಣಿಗೆ ಕುಂಠಿತವಾಗಿ ಮಾಗುವಿಕೆ ನಿಧಾನವಾಗುತ್ತದೆ. ಕೊರತೆ ನೀಗಿಸಲು: ಸೂಪರ್ ಪಾಸ್ಪೇಟ್ ಗೊಬ್ಬರ ಹಾಕಬೇಕು.

3)ಪೋಟ್ಯಾಷ್ ಕೊರತೆ: ಹಳೆಯ ಎಲೆಗಳ ತುದಿಗಳು ಹಾಗೂ ಅಂಚುಗಳು ಹಳದಿಯಾಗಿ ನಂತರ ಒಣಗಿ ಸುಟ್ಟಂತಾಗುತ್ತದೆ. ಕೊರತೆ ನೀಗಿಸಲು: ಮ್ಯುರೇಟ್ ಆಫ್ ಪೋಟ್ಯಾಸ್ ಹಾಕಬೇಕು.

4)ಕ್ಯಾಲ್ಸಿಯಂ/ಸುಣ್ಣ: ಎಳೆಯ ಎಲೆ, ಮೊಗ್ಗಿನ ತುದಿಗಳು ಒಣಗಿ ಹೋಗುತ್ತವೆ. ಹಣ್ಣುಗಳಲ್ಲಿ ಕೆಳಭಾಗ ಕಪ್ಪು ಬಣ್ಣ ಕಾಣಿಸಿಕೊಂಡು ತೀವ್ರ ಕೊರತೆಯಿಂದ ಕೊಳೆಯುತ್ತವೆ. ಕೊರತೆ ನೀಗಿಸಲು: ಮಣ್ಣು ಪರೀಕ್ಷೆ ಆಧಾರದ ಮೇಲೆ ಮಣ್ಣಿಗೆ ಸುಣ್ಣ ಹಾಕಬೇಕು.

5)ಮೆಗ್ನೀಷಿಯಂ: ಹಳೆಯ ಎಲೆಗಳ ನರಗಳ ನಡುವೆ ಹಳದಿ ಮಿಶ್ರಿತ ಹಸಿರು ಬಣ್ಣದ ಮಚ್ಚೆಗಳು ಕಾಣಿಸುತ್ತವೆ. ಕೊರತೆ ನೀಗಿಸಲು: ಮೇಗ್ನೀಷಿಯಂ ಸಲ್ಪೇಟ್ ಗೊಬ್ಬರ ಹಾಕಬೇಕು.

6)ಗಂಧಕ: ಹೊಸ ಎಳೆ ಎಲೆಗಳು ತಿಳಿ ಹಸಿರು/ಹಳದಿಯಾಗುತ್ತವೆ. ಎಣ್ಣೆಕಾಳುಗಳಲ್ಲಿ ಎಣ್ಣೆ ಅಂಶ ಕಡಿಮೆಯಾಗುತ್ತದೆ. ಕೊರತೆ ನೀಗಿಸಲು: ಅಮೋನಿಯಂ ಸಲ್ಫೇಟ್, ಪೊಟ್ಯಾಷಿಯಂ ಸಲ್ಫೇಟ್, ಸೂಫರ್ ಪಾಸ್ಫೇಟ್, ಮಣ್ಣಿಗೆ ಸೇರಿಸಬೇಕು.

7)ಸತು ಕೊರತೆ: ಹೊಸ ಎಲೆಗಳು ಸಣ್ಣದಾಗಿ ಮಧ್ಯದ ಭಾಗ ದಟ್ಟ ಹಸಿರಾಗಿರುತ್ತದೆ. ಬೆಳವಣಿಗೆ ಕುಂಠಿತಗೊಂಡು ಬೂದು ಬಣ್ಣದ ಚುಕ್ಕಿ ಕಾಣಿಸಿಕೊಳ್ಳುತ್ತವೆ. ಕೊರತೆ ನೀಗಿಸಲು: ಸತುವಿನ ಸಲ್ಫೇಟ್ ಬಳಕೆ ಮಾಡಬೇಕು.

8)ಕಬ್ಬಿಣ ಕೊರತೆ: ಹೊಸ ಎಲೆಗಳ ನರಗಳ ಮ‍ದ್ಯಭಾಗ ಹಳದಿ ಬಣ್ಣಕ್ಕೆ ತಿರುಗುತ್ತದೆ. ಕೊರತೆ ನೀಗಿಸಲು: ಕಬ್ಬಿಣದ ಸಲ್ಫೇಟ್ ಬಳಸಬೇಕು.

9)ಬೋರಾನ್ ಕೊರತೆ: ಹೊಸ ಎಲೆಗಳು ಗೊಂಚಲಿನ ರೂಪ ಪಡೆಯುತ್ತವೆ. ಕಾಂಡ ಮತ್ತು ಕಾಯಿ ಒಡೆಯುತ್ತದೆ ಹಾಗೂ ಗಿಡಗಳ ತುದಿ ಒಣಗುತ್ತದೆ. ಹೂ, ಮೊಗ್ಗು ಮತ್ತು ಬೀಜಗಳ ಸಂಖ್ಯೆ ಕಡಿಮೆಯಾಗುತ್ತದೆ. ಕೊರತೆ ನೀಗಿಸಲು: ಬೋರಾನ್ ಗೊಬ್ಬರ ಬಳಸಬೇಕು.

10)ತಾಮ್ರ ಕೊರತೆ: ಎಲೆಗಳ ಅಂಚಿನಲ್ಲಿ ಹಸಿರು ಬಣ್ಣ ಕಳೆದುಕೊಂಡು ಒಣಗುತ್ತವೆ. ಕಾಂಡಗಳ ತುದಿಗಳಲ್ಲಿ ಮುದುಡಿದ ಹಾಗೂ ಮಾಸಲು ಬಿಳಿ ಬಣ್ಣದ ಎಲೆಗಳು ಕಾಣಿಸುತ್ತವೆ ಮತ್ತು ಉದುರುತ್ತವೆ.

11)ಮ್ಯಾಂಗನೀಸ್ ಕೊರತೆ: ಪತ್ರನಾಳಾಂತರ ಹಸಿರು ಬಣ್ಣವನ್ನು ಕಳೆದುಕೊಂಡು ಹಳದಿ ಬಣ್ಣಕ್ಕೆ ತಿರುಗುತ್ತವೆ.

12)ಮಾಲಿಬ್ಡಿನಂ ಕೊರತೆ: ಎಲೆಗಳು ತಿಳಿ ಹಸಿರು ಅಥವಾ ಹಳದಿ ಬಣ್ಣವನ್ನು ಹೊಂದಿ ನರಗಳ ಮಧ್ಯಂತರ ಭಾಗ ಹಳದಿಯಾಗುತ್ತದೆ. ಎಲೆಗಳ ತುದಿಗಳು ಮುದಡುತ್ತವೆ.

ಹೆಚ್ಚಿನ ಮಾಹಿತಿಗೆ ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಅಥವಾ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಳ್ಳಿ.

ಇತ್ತೀಚಿನ ಸುದ್ದಿಗಳು

Related Articles