ಕೀಟನಾಶಕಗಳು ಮೂಲತಃ ವಿಷಕಾರಿ ವಸ್ತುಗಳು, ಅವುಗಳ ಶಿಸ್ತುಬದ್ಧ ಬಳಕೆಯಿಂದ ಮಾನವನ ಆರೋಗ್ಯದ ಮೇಲೆ ಉಂಟಾಗಬಹುದಾದ ಪ್ರತಿಕೂಲ ಪರಿಣಾಮಗಳನ್ನು ತಡೆಗಟ್ಟುವುದರ ಜೊತೆಯಲ್ಲಿ ತನ್ನ ಬೆಳೆಯನ್ನು ಬಾಧಿಸುವ ಕೀಟ ರೋಗಗಳನ್ನು ಯಶಸ್ವಿಯಾಗಿ ದೂರವಿಡಬಹುದು. ಈ ನಿಟ್ಟಿನಲ್ಲಿ ಬಳಕೆದಾರ ಅಥವಾ ರೈತ ಈ ಕೆಳಕಂಡ ಕ್ರಮಗಳ ಬಗ್ಗೆ ಗಮನಹರಿಸುವುದು ಅನಿವಾರ್ಯ.
ಬಳಕೆದಾರ( ಸಿಂಪರಣೆ ಮಾಡುವ ವ್ಯಕ್ತಿ) :
ಮಕ್ಕಳು, ಬುದ್ಧಿಮಾಂದ್ಯರು, ರೋಗಿಗಳು, ಮಾನಸಿಕವಾಗಿ ಅಸ್ವಸ್ಥಗೊಂಡಿರುವವರು, ಗಾಯಾಳುಗಳು ಹಾಗೂ ವೃದ್ಧರನ್ನು ಹೊರತುಪಡಿಸಿ ಉಳಿದವರು ಕೀಟನಾಶಕಗಳನ್ನು ಸಿಂಪರಣೆ ಮಾಡಬಹುದು.
ಕೀಟನಾಶಕಗಳ ಶೇಖರಣೆ:
ಕೀಟನಾಶಕಗಳ ವಿಷ ಪ್ರಮಾಣ ಅಥವಾ ಶಕ್ತಿ ಹಲವಾರು ಹವಾಮಾನ ಅಥವಾ ವಾತಾವರಣದ ವೈಪರೀತ್ಯಗಳಿಂದ ಬದಲಾಗುವ ಸಾಧ್ಯತೆಗಳಿವೆ. ಉದಾಹರಣೆಗೆ ಉಷ್ಣಾಂಶ, ತೇವಾಂಶ ನೇರವಾಗಿ ಬೀಳುವ ಸೂರ್ಯನ ಕಿರಣಗಳು ಮುಂತಾದವುಗಳು ಕೀಟನಾಶಕಗಳ ಶಕ್ತಿಯನ್ನು ಕಡಿಮೆ ಮಾಡಬಹುದಾದ ಸಾಧ್ಯತೆಗಳಿವೆ. ಆದ್ದರಿಂದ ಕೀಟನಾಶಕಗಳನ್ನು ತಂಪಾದ ಸ್ಥಳಗಳಲ್ಲಿ ಹಾಗೂ ನೇರವಾಗಿ ಸೂರ್ಯನ ಕಿರಣಗಳು ಬೀಳದಂತಹ ಪ್ರದೇಶಗಳಲ್ಲಿ ಇಡಬೇಕು.
ಕೀಟನಾಶಕಗಳ ಆಯ್ಕೆ :
ರೈತ ಬಾಂಧವರು ಸಂಬಂಧಪಟ್ಟ ಇಲಾಖೆಯಿಂದ ಶಿಫಾರಿಸಲ್ಪಟ್ಟ ನಿರ್ದಿಷ್ಟ ಕೀಟನಾಶಕಗಳನ್ನು ಮಾತ್ರ ಬಳಸಬೇಕು. ಕೀಟನಾಶಕಗಳ ವಿಷಯುಕ್ತ ಪ್ರಮಾಣ, ಬಳಕೆದಾರನ ಮೇಲೆ ಆಗಬಹುದಾದ ಪರಿಣಾಮ ಅಥವಾ ಅಪಾಯಗಳನ್ನು ಆಧಾರವಾಗಿಟ್ಟುಕೊಂಡು ಅವುಗಳನ್ನು 4 ವಿಭಾಗಗಳಾಗಿ ಕೆಳಕಂಡಂತೆ ವಿಂಗಡಿಸಲಾಗಿದೆ.
ಕ್ರಮ ಸಂಖ್ಯೆ | ವಿಂಗಡನಾ ಪಂಗಡ | ಎಚ್ಚರಿಕೆ ತಿಳುವಳಿಕೆ |
1 | ಭಾರಿ ವಿಷಕಾರಿ | ಮಕ್ಕಳಿಂದ ದೂರವಿರಿಸಿ. ಸೇವಿಸಿದಲ್ಲಿ ವೈದ್ಯರಿಗೆ ತೋರಿಸಿ. |
2 | ತುಂಬಾ ವಿಷಕಾರಿ | ಮಕ್ಕಳಿಂದ ದೂರವಿರಿಸಿ. |
3 | ಸಾಧಾರಣ ವಿಷಕಾರಿ | ಮಕ್ಕಳಿಂದ ದೂರವಿರಿಸಿ. |
4 | ಅಲ್ಪ ವಿಷಕಾರಿ | ಮಕ್ಕಳಿಂದ ದೂರವಿರಿಸಿ. |
ಕೆಳಗಿನ ತ್ರಿಕೋನದ ಬಣ್ಣಗಳ ಆಧಾರದ ಮೇಲೆ ಕೀಟನಾಶಕಗಳ ವಿಷ ಪ್ರಮಾಣ ಮತ್ತು ಅಪಾಯವನ್ನು ಅನಕ್ಷರಸ್ಥರು ಕೂಡ ತಿಳುವಳಿಕೆ ಪಡೆಯಬಹುದಾಗಿದ್ದು, ಕೀಟನಾಶಕಗಳ ಆಯ್ಕೆಯ ಸಮಯದಲ್ಲಿ ಈ ಮೇಲಿನ ಸೂಚನೆಗಳತ್ತ ಗಮನ ನೀಡಬೇಕು.
ಕೆಲವೊಂದು ಕೀಟನಾಶಕಗಳು ಬೆಂಕಿ ತಗುಲಿದಾಗ ಹೊತ್ತಿಕೊಳ್ಳುವ ಸಾಧ್ಯತೆ ಇದ್ದು, ಅಂತಹ ಕೀಟನಾಶಕಗಳ ಶೀಷೆಗಳ ಮೇಲೆಅದಕ್ಕೆ ಸಂಬಂಧಪಟ್ಟ ಮಾಹಿತಿ ನೀಡಲಾಗುತ್ತದೆ. ಅಂತಹ ಕೀಟನಾಶಕಗಳನ್ನು ಶೇಖರಿಸಿಡುವಾಗ ಬೆಂಕಿ ಮುಂತಾದವುಗಳಿಂದ ದೂರವಿಡಬೇಕು.