Sunday, October 6, 2024

Nano Urea- ನ್ಯಾನೋ ಯೂರಿಯಾ ಎಂದರೇನು? ಅದರ ಬಳಕೆ ಕುರಿತು ಒಂದಿಷ್ಟು ಮಾಹಿತಿ.

ಇತ್ತೀಚಿನ ದಿನಗಳಲ್ಲಿ ರೈತರಿಗೆ ಸಾಕಷ್ಟು ಪ್ರಮಾಣದಲ್ಲಿ  ಯೂರಿಯಾ (ಸಾರಜನಕ) ಗೊಬ್ಬರ ಸಿಗುತ್ತಿಲ್ಲ. ಹೀಗಾಗಿ ರೈತರಿಗೆ ಕೃಷಿ ಮಾಡಲು ಸಮಸ್ಯೆ ಎದುರಾಗುತ್ತಿದೆ. ಈ ಸಮಸ್ಯೆಗೆ ಪರಿಹಾರವಾಗಿ ನ್ಯಾನೋ ಯೂರಿಯಾ ವನ್ನು ಬಿಡುಗಡೆ ಮಾಡಲಾಗಿದೆ.

ಬೆಳೆ ಬೆಳೆಯಲು ಪೋಷಕಾಂಶಗಳು ಮತ್ತು ನೀರಿನ ಲಭ್ಯತೆ ಬೆಳೆ ಇಳುವರಿಯ ಮೇಲೆ ನೇರ ಪರಿಣಾಮ ಬೀರುತ್ತದೆ. ಸಸ್ಯ ದೇಹದ ಶೇ.90 ಕ್ಕಿಂತ ಹೆಚ್ಚು ಭಾಗ ಇಂಗಾಲ, ಜಲಜನಕ ಮತ್ತು ಆಮ್ಲಜನಕಗಳನ್ನು ಹೊಂದಿದ್ದು ಇವುಗಳನ್ನು ಪರಿಸರದಿಂದಲೇ ಪಡೆಯುತ್ತವೆ. ಸಾರಜನಕ, ರಂಜಕ, ಪೋಟ್ಯಾಷ್‌ ಗಳು ಪ್ರಧಾನ ಪೋಷಕಾಂಶಗಳಾಗಿದ್ದು ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುತ್ತದೆ. ಉಳಿದ ಪೋಷಕಾಂಶಗಳು ಕಡಿಮೆ ಪ್ರಮಾಣದಲ್ಲಿ ಬೇಕಾಗುತ್ತವೆ.

ಸರಕಾರವು ರಸಗೊಬ್ಬರ ತಯಾರಿಕೆ ಮತ್ತು ಮಾರಾಟಕ್ಕೆಅಪಾರ ರಿಯಾಯತಿ ನೀಡುತ್ತಿದೆ.ಇಂತಹ ಸಂದರಭದಲ್ಲಿ ಇಪ್ಕೋ ಅಂದರೆ ಭಾರತೀಯ ರೈತರ ಗೊಬ್ಬರ ಸಹಕಾರಿ ಸಂಸ್ಥೆ (IFFCO) ದ್ರವರೂಪದ ನ್ಯಾನೋ ಯೂರಿಯಾ ರಸಗೊಬ್ಬರವನ್ನು ಅಭಿವೃದ್ಧಿ ಪಡಿಸಿದೆ.

ಇದನ್ನೂ ಓದಿ: ತೋಟಗಾರಿಕೆ ಇಲಾಖೆಯಿಂದ ರೈತರ ಮಕ್ಕಳಿಗೆ ಶಿಷ್ಯವೇತನದೊಂದಿಗೆ ಉಚಿತ ತರಬೇತಿಗೆ ಅರ್ಜಿ ಆಹ್ವಾನ.

Nano Urea-ನ್ಯಾನೋ ಯೂರಿಯಾದ ಲಾಭಗಳು:

ನ್ಯಾನೋ ಯೂರಿಯಾದ ದ್ರಾವಣವು ಶೇ.4 ರಷ್ಟು ಸಾರಜನಕವನ್ನು ಹೊಂದಿದ್ದು,ಬೆಳೆಯು ನ್ಯಾನೊ ಯೂರಿಯಾವನ್ನು ಹೀರಿಕೊಳ್ಳುವ ಪ್ರಮಾಣವು ಶೇ.80 ಕ್ಕಿಂತಹೆಚ್ಚು ಎಂದು ತಿಳಿದು ಬಂದಿದೆ. ದ್ರವರೂಪದ ನ್ಯಾನೋ ಯೂರಿಯಾ500 ಮಿ.ಲೀ ಬಾಟಲಿನಲ್ಲಿ ಲಭ್ಯವಿದ್ದು,ಇದು ಒಂದು ಚೀಲ ಯೂರಿಯಾಗೆ ಸಮ ಎಂದು ಇಪ್ಕೋ ಸಂಸ್ಥೆ ಪ್ರತಿಪಾದಿಸಿದೆ. ನ್ಯಾನೋ ಯೂರಿಯಾವು ವಿವೇಚನಾ ರಹಿತ ಬಳಕೆಯನ್ನು ಕಡಿಮೆಮಾಡುವುದಲ್ಲದೇ ಶೇ.50 ರಷ್ಟು ಯೂರಿಯಾ ಉಳಿತಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.

ಸಾಮಾನ್ಯವಾಗಿ ಆರೋಗ್ಯವಂತ ಬೆಳೆಯಲ್ಲಿ ಸಾರಜನಕದ ಪ್ರಮಾಣವು ಶೇ.1.5 ರಿಂದ4.0 ಆಗಿರುತ್ತದೆ. ನ್ಯಾನೋ ಯೂರಿಯಾವನ್ನು ಬೆಳೆಯ ಸಂದಿಗ್ಧ ಹಂತಗಳಲ್ಲಿ ಸಿಂಪರಣೆ ಮಾಡುವುದರಿಂದ ಇದು ಪತ್ರ ರಂಧ್ರಗಳ ಮೂಲಕ ಸಸ್ಯ ದೇಹವನ್ನು ಪ್ರವೇಶಿಸುತ್ತದೆ.

ಜೀವಕೋಶಗಳಲ್ಲಿ ಸಂಗ್ರಹವಾಗುವ ನ್ಯಾನೋ ಯೂರಿಯಾ, ಬೆಳೆಗೆ ಅಗತ್ಯವಾದಾಗ ಅಂದರೆ ಬೆಳೆವಣಿಗೆ ಹಂತದಲ್ಲಿ ಬಳಕೆಗೆ ದೊರೆಯುತ್ತದೆ. ಇದು ಬೆಳೆಯ ಸಾರಜನಕದ ಅಗತ್ಯವನ್ನು ಪೂರೈಸುವುದರ ಜೋತೆಗೆ ಆಹಾರ ಉತ್ಪಾದನಾ ಸಾಮರ್ಥಯ, ಬೇರುಗಳ ಗಾತ್ರ ಮತ್ತು ತೂಕ ಹೆಚ್ಚಿಸುವುದರ ಜೊತೆಗೆ ಕವಲುಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಎಂದು ಹೇಳಲಾಗಿದೆ. ಉತ್ಪಾದಕತೆ ಹೆಚ್ಚುವುದರಿಂದ ಉತ್ಪಾದನಾ ವೆಚ್ಚ ಕಡಿಮೆಯಾಗುತ್ತದೆ. ಗುಣಮಟ್ಟದ ಬೆಳೆಯನ್ನು ಪಡೆಯಲು ನೆರವಾಗುತ್ತದೆ. ಎಂಬುದು ಸಂಸ್ಥೆಯ ಹೇಳಿಕೆ.

ಇದನ್ನೂ ಓದಿ: ತೋಟಗಾರಿಕೆ ಇಲಾಖೆಯಲ್ಲಿ ಶೀಟ್‌ ಬಳಸಿ ನೀರು ಸಂಗ್ರಹ ಕೃಷಿ ಹೊಂಡ(ಕೆರೆ) ಮಾಡಿಕೊಳ್ಳುವರಿಗೆ ಸಬ್ಸಿಡಿ ನೀಡಲಾಗುತ್ತಿದೆ.

ನ್ಯಾನೋ ಯೂರಿಯಾ ಬಳಕೆ ವಿಧಾನ:

ನ್ಯಾನೋ ಯೂರಿಯಾ ಮಾರುಕಟ್ಟೆಯಲ್ಲಿ ದ್ರವರೂಪದಲ್ಲಿ ದೊರೆಯುತ್ತದೆ. ಆದ್ದರಿಂದ ಸಿಂಪರಣೆಯ ಮೂಲಕ ಬೆಳೆಗೆ ಒದಗಿಸಬೇಕು. 3 ರಿಂದ 4 ಮಿ.ಲೀ. ನ್ಯಾನೋ ಯೂರಿಯಾವನ್ನು ಪ್ರತಿ ಲೀಟರಿನಲ್ಲಿ ಬೆರೆಸಿ ಬೆಳೆಗೆ ಸಿಂಪಡಿಸಬೇಕು. ಒಂದು ಎಕರೆಗೆ 150 ಲೀಟರ್ ದ್ರಾವಣ ಶಿಫಾರಸ್ಸು ಮಾಡಲಾಗಿದೆ. ಇದನ್ನು ಬೆಳೆಯ ಅವಧಿಯಲ್ಲಿ ಎರಡು ಬಾರಿ ಸಿಂಪರಿಸಬೇಕು. ಮೊದಲ ಸಿಂಪರಣೆಯನ್ನು ಬಿತ್ತನೆಯಾದ 30-35 ದಿನಗಳ ನಂತರ ಮತ್ತು ಎರಡನೇಯ ಸಿಂಪರಣೆ ಹೂವಾಡುವುದಕ್ಕಿಂತ ಮೊದಲು ಶಿಫಾರಸಿದೆ.

ಏನಿದು ನ್ಯಾನೋ: ನ್ಯಾನೋ ಎಂದರೆ ಅತ್ಯಂತ ಚಿಕ್ಕದು. ಒಂದು ಮೀಟರನ್ನು ನೂರು ಕೋಟಿ ಭಾಗ ಮಾಡಿದಾಗ ದೊರೆಯುವ ಅತ್ಯಂತ ಚಿಕ್ಕ ಭಾಗವೇ ನ್ಯಾನೋ ಮೀಟರ್. ಕಣಗಳ ಗಾತ್ರ ಚಿಕ್ಕದಾದಷ್ಟು ಅದರ ಮೇಲ್ಮೈ ವಿಸ್ತೀರ್ಣ ಹೆಚ್ಚಾಗುದಲ್ಲದೇ ಅದರ ಕ್ರಿಯಾಶೀಲತೆಯೂ ಹೆಚ್ಚಾಗುತ್ತದೆ.

ಇತ್ತೀಚಿನ ಸುದ್ದಿಗಳು

Related Articles