ನಮ್ಮ ದೇಶದಲ್ಲಿ ವಿಪುಲವಾಗಿ ಲಭ್ಯವಿರುವ ಜಲ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಪೌಷ್ಟಿಕ ಆಹಾರದ ಕೊರತೆಯನ್ನು ನೀಗಿಸುವ ದೃಷ್ಟಿಯಿಂದ ಮತ್ತು ದೇಶದ ಆರ್ಥಿಕ ಅಭಿವೃದ್ಧಿಯಿಂದ ಮೀನುಗಾರಿಕೆಯು ವಿಶಿಷ್ಟವಾದ ಪ್ರಾಮುಖ್ಯತೆಯನ್ನು ಪಡೆದಿದೆ.
ಈಗಿನ ಪರಿಸ್ಥಿತಿಯಲ್ಲಿ ಸಮುದ್ರ ಮೀನುಗಾರಿಕೆಯು ಕೇವಲ ಮೀನು ಹಿಡುವಳಿಯಲ್ಲಿ ತೊಡಗಿಸಿಕೊಂಡಿರುವುದರಿಂದ ಒಳನಾಡು ಮೀನುಗಾರಿಕೆ ಉತ್ಪಾದನೆಯಲ್ಲಿ ಅತಿಮುಖ್ಯ ಹಾಗೂ ಅನಿವಾರ್ಯವಾಗಿದೆ.
ಮೀನು ಮಾನವನಿಗೆ ಅಗತ್ಯವಿರುವ ಉತ್ತಮ ಪೌಷ್ಟಿಕ ಪ್ರಾಣಿಜನ್ಯ ಆಹಾರದ ಮೂಲವಾಗಿರುವುದಲ್ಲದೇ ಲಕ್ಷಾಂತರ ಮೀನುಗಾರರ ಜೀವನಾಧಾರ. ರಾಜ್ಯದಲ್ಲಿ ಅಗಾಧವಾದ ಸಮುದ್ರ, ಕಡಲ ಹಿನ್ನೀರು ಜಲ ಸಂಪನ್ಮೂಲಗಳು, ಒಳನಾಡು ಪ್ರದೇಶದ ಕೆರೆಗಳು, ಜಲಾಶಯಗಳು, ನದಿಗಳು ರಾಜ್ಯದ ಮೀನುಗಾರಿಕೆ ಅಭಿವೃದ್ಧಿಗೆ ವಿಪುಲ ಅವಕಾಶ ಒದಗಿಸಿವೆ. ವಿಶ್ವ ಮಟ್ಟದ ಮೀನು ಲಭ್ಯತೆಗೆ ಹೋಲಿಸಿದರೆ ರಾಜ್ಯದ ಜನತೆಗೆ 5.3 ಕೆ.ಜಿ. ತಲಾ ಮೀನು ಲಭ್ಯತೆಯು ತುಂಬಾ ಕಡಿಮೆ.
ಜನಸಂಖ್ಯೆಯು ಹೆಚ್ಚುತ್ತಿದ್ದಂತೆ ಮೀನು ಮತ್ತು ಮೀನು ಉತ್ಪನ್ನಗಳ ಬೇಡಿಕೆ ಹೆಚ್ಚಲಿದೆ. ಈ ದೃಷ್ಟಿಯಿಂದ ಮೀನು ಉತ್ಪಾದನೆ ಹೆಚ್ಚಿಸಲು ಒಳನಾಡು ಮೀನುಗಾರಿಕೆ ಯಲ್ಲಿ ವಿಪುಲ ಅವಕಾಶಗಳಿವೆ. ಲಭ್ಯವಿರುವ ಎಲ್ಲಾ ಜಲ ಸಂಪನ್ಮೂಲಗಳನ್ನು ಮೀನುಗಾರಿಕೆ ಬಳಸಿಕೊಂಡಲ್ಲಿ ಸುಮಾರು 2.75 ಲಕ್ಷ ಟನ್ನುಗಳಷ್ಟು ಒಳನಾಡು ಮೀನು ಉತ್ಪಾದಿಸಬಹುದೆಂದು ಅಂದಾಜಿಸಲಾಗಿದೆ.
ಈ ಪರಿಸ್ಥಿತಿಯಲ್ಲಿ ತಾಲೂಕಿನಲ್ಲಿರುವ ಸಣ್ಣ ಕೆರೆಗಳು, ಕೃಷಿ ಹೊಂಡಗಳು ಹಾಗೂ ಖಾಸಗಿ ಕೊಳಗಳಲ್ಲಿ ಮೀನು ಕೃಷಿ ಕೈಗೊಂಡು ನಿರುದ್ಯೋಗ ನಿವಾರಣೆ ಹಾಗೂ ಪೌಷ್ಟಿಕ ಆಹಾರದ ಕೊರತೆ ನೀಗಿಸುವ ನಿಟ್ಟಿನಲ್ಲಿ ಫಲಕಾರಿಯಾಗಿದೆ.