Friday, September 20, 2024

ಕೃಷಿ ಜೊತೆಗೆ ಉಪಕಸಬು ಮಾಡಿ ರೂ. 4,00,000/- ಕ್ಕಿಂತ ಅಧಿಕ ಆದಾಯ ಗಳಿಸುತ್ತಿರುವ ಸಾಧಕ ರೈತ

ಭಾರತ ದೇಶವು ಕೃಷಿ ಪ್ರಧಾನ ದೇಶವಾಗಿದ್ದು, ಇಂದಿಗೂ ಶೇಕಡ 60 ರಿಂದ ಶೇಕಡ 65 ರಷ್ಟು ಜನಸಂಖ್ಯೆ ಕೃಷಿ ಮತ್ತು ಕೃಷಿ ಆಧಾರಿತ ಕೆಲಸವನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಯುವಕರು ಕೃಷಿಯನ್ನು ಮಾಡದೆ ನಗರಗಳ ವ್ಯಾಮೋಹಕ್ಕೆ ಬಲಿಯಾಗಿ ನಗರದಲ್ಲಿ ನೌಕರಿ, ಖಾಸಗಿ ಉದ್ಯೋಗ, ವ್ಯಾಪಾರ, ಕೂಲಿ ಕೆಲಸ ಮತ್ತು ಮುಂತಾದ ಕಾರ್ಯಗಳಲ್ಲಿ ತೊಡಗಿಕೊಂಡಿರುತ್ತಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿ ಅಭಿವೃದ್ಧಿಗಾಗಿ ಹಲವಾರು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದರೂ ಮತ್ತು ತರುತ್ತಿದ್ದರೂ ಕೂಡ ಕೃಷಿ ಅಭಿವೃದ್ಧಿ ದರ ಅಷ್ಟೇನೂ ಫಲಪ್ರದವಾಗಿ ಇರುವುದಿಲ್ಲ. ಏಕೆಂದರೆ ಪ್ರಚಲಿತ ದಿನಮಾನಗಳಲ್ಲಿ ಯುವಕರ ಮನಸ್ಸಿನಲ್ಲಿ ಕೃಷಿ ಒಂದು ಲಾಭದಾಯಕ ಉದ್ಯೋಗವಲ್ಲ ಎಂಬುದು ಅವರ ಮನಸ್ಸಿನಲ್ಲಿ ಗಾಢವಾಗಿ ಬೇರೂರಿದೆ. ಇಂತಹ ಯುವಕರ ಸಾಲಿನಲ್ಲಿ ಕ್ರಷಿಯನ್ನೇ ತನ್ನ ಜೀವಾಳವೆಂದು ನಂಬಿ ಇರುವ ತಮ್ಮ ಜಮೀನಿನಲ್ಲೇ ಕೃಷಿ ಪ್ರಯೋಗಗಳನ್ನು ಮಾಡುತ್ತಾ ಯಶಸ್ವಿ ಕೃಷಿಕ ಎನಿಸಿಕೊಂಡ ಶ್ರೀ ಶ್ರೀಕಾಂತ ಶೇಷು ನಾಯ್ಕ ಅವರ ಯಶೋಗಾಥೆ ಒಂದು ನೋಟ ಇಲ್ಲಿದೆ.

ಶ್ರೀ ಶ್ರೀಕಾಂತ ಶೇಷು ನಾಯ್ಕ ಮೂಲತಃ ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕು ಅಲಗೇರಿ ಗ್ರಾಮದ ರೈತರಾಗಿದ್ದು, “ಆಳಾಗಿ ದುಡಿ ಅರಸನಾಗಿ ಉಣ್ಣು” ಎಂಬ ನಾಣ್ನುಡಿಯಂತೆ ತಮ್ಮ ಜಮೀನಿನಲ್ಲಿ ತಾನು ಮತ್ತು ತನ್ನ ಹೆಂಡತಿಯ ಸಹಾಯದಿಂದ ತಾವೇ ಸ್ವಂತ ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಶ್ರೀಯುತರಿಗೆ ಒಟ್ಟು 2-30-0 ಜಮೀನು ಇದ್ದು, ಮುಂಗಾರಿನಲ್ಲಿ ಭತ್ತ, ಹಿಂಗಾರಿನಲ್ಲಿ ಶೇಂಗಾ ಮಾಡಿಕೊಂಡು ಸಾಗುವಳಿ ಮಾಡುತ್ತಿದ್ದರು.

ಪ್ರೇರಣೆ:-

ಇದನ್ನೂ ಓದಿ: ಆಧುನಿಕ ರೈತರಿಗೆ ಮಾದರಿಯಾದ ಮಲ್ಟಿ ಟ್ರೀ ಬೈಕ್ ಆವಿಷ್ಕರಿಸಿದ ಸಾಮಾನ್ಯ ರೈತ


ಕೃಷಿ ಭೂಮಿಯಲ್ಲಿ ವರ್ಷಕ್ಕೆ ಎರಡೇ ಬೆಳೆಗಳನ್ನು ಬೆಳೆದು ಆದಾಯವಿಲ್ಲದೆ ಜೀವನ ಸಾಗಿಸುತ್ತಿದ್ದರು. ಕೃಷಿ ಮತ್ತು ಕೃಷಿಯೇತರ ಇಲಾಖೆಗಳ ಸಂಪರ್ಕ ಹೊಂದಿ ತಾಂತ್ರಿಕ ಮಾಹಿತಿಗಳನ್ನು ಪಡೆದುಕೊಂಡು ತಮ್ಮ ಜಮೀನಿನಲ್ಲಿ ಅಳವಡಿಸಿಕೊಂಡು ಪ್ರಾರಂಭಿಸಿದರು.

ಕೃಷಿ ಬೆಳೆಯಲ್ಲಿ ತಾಂತ್ರಿಕತೆ

ಮಳೆಯನ್ನು ಅವಲಂಬಿತವಾಗಿರುವ ಖುಷ್ಕಿ ಭೂಮಿಯಲ್ಲಿ ಸರ್ವೇ ಸಾಮಾನ್ಯವಾಗಿ ಬೆಳೆ ಉತ್ಪಾದನೆ ಕಡಿಮೆಯಾಗಿರುತ್ತದೆ ಮತ್ತು ಸ್ಥಿರವಾಗಿರುತ್ತದೆ ಇದನ್ನು ಮನಗಂಡು ಇದ್ದ ಜಮೀನಿನಲ್ಲಿ ಒಂದೇ ಬೆಳೆ ಬೆಳೆಯದೆ ಮುಂಗಾರಿನಲ್ಲಿ ಭತ್ತ, ಹಿಂಗಾರಿನಲ್ಲಿ ಶೇಂಗಾ ಹಾಗೂ ಬೇಸಿಗೆಯಲ್ಲಿ ಕಲ್ಲಂಗಡಿ ಮತ್ತು ಮನೆಯ ಮುಂದೆ 30 ಗುಂಟೆ ಜಾಗದಲ್ಲಿ ಅಡಿಕೆ, ತೆಂಗು, ಹೂವಿನ ಬೆಳೆಗಳು ಹಾಗೂ ತರಕಾರಿಗಳನ್ನು ಮಾಡುತ್ತಿರುತ್ತಾರೆ.

ಜೇನು ಕೃಷಿ:-

ಕೃಷಿಯಲ್ಲಿ ಜೇನು ಸಾಕಾಣಿಕೆ ಕೇವಲ ಆಹಾರ ಭದ್ರತೆ ಮಾತ್ರವಲ್ಲದೆ ಆರ್ಥಿಕ ಭದ್ರತೆಯನ್ನು ಸಹ ನಮ್ಮ ಗ್ರಾಮೀಣ ಭಾಗದವರಿಗೆ ಒದಗಿಸಿದೆ. ಹಾಗೆಯೇ ಸಮಗ್ರ ಕೃಷಿ ಪದ್ಧತಿಯಲ್ಲಿ ಇದು ಒಂದು ಉಪ ಆದಾಯವೆಂದು ಹೇಳಬಹುದು. ಆದರೆ ಇದನ್ನೇ ಮುಖ್ಯ ಕಸಬಾಗಿ ಮಾಡಿಕೊಂಡು ಜೇನು ಕೃಷಿಯಿಂದ ಜೇನುತುಪ್ಪ, ಮೇಣ, ರಾಜಶಾಹಿಗಳಂತ ಉಪ ಉತ್ಪನ್ನಗಳು ದೊರೆಯುತ್ತವೆ. ಇವುಗಳಿಗಿಂತ ಬಹು ಮುಖ್ಯವಾದ ಲಾಭವೆಂದರೆ ಜೇನು ಹುಳುಗಳಿಂದ ಪರಾಗಸ್ಪರ್ಶ ಕ್ರಿಯೆ ಇದು ಬೆಳೆಗಳ ಇಳುವರಿಗೆ ಸಹಕಾರಿಯಾಗಿದೆ. ಹೀಗಿರುವಾಗ ಇವರು ಅಂಕೋಲಾ ಜೇನು ವ್ಯವಸಾಯಗಾರರ ಮತ್ತು ಗ್ರಾಮಾಂತರ ಕೈಗಾರಿಕಾ ಸಹಕಾರ ಸಂಘ ಅಂಕೋಲಾದಲ್ಲಿ ಸದಸ್ಯತ್ವವನ್ನು ಪಡೆದು ಅವರಿಂದ ಜೇನುಪೆಟ್ಟಿಗೆಯನ್ನು ತರಿಸಿಕೊಂಡು ತಮ್ಮ ಗದ್ದೆ ತೋಟ ಮತ್ತು ಮನೆಯ ಸುತ್ತಮುತ್ತಲು ಹಾಗೂ ಸಂಬಂಧಿಕರ ಮನೆಯ ಸುತ್ತಲೂ 60-80 ಜೇನು ಪೆಟ್ಟಿಗೆ ಅಳವಡಿಸಿಕೊಂಡಿರುತ್ತಾರೆ. ಹೀಗೆ ಅಳವಡಿಸಿಕೊಂಡು ತಮ್ಮ ಜಮೀನಿನ ಇಳುವರಿ ಜೊತೆಗೆ ಅಕ್ಕ ಪಕ್ಕದ ರೈತರ ತೋಟದಲ್ಲಿ, ಗದ್ದೆಯಲ್ಲಿ, ಬೆಳೆದ ಬೆಳೆಗಳ ಇಳುವರಿ ಗಣನೀಯವಾಗಿ ಹೆಚ್ಚಿಗೆ ಆಗಿರುವುದಾಗಿ ಸ್ವತಃ ರೈತರಾದ ಶ್ರೀಕಾಂತ ನಾಯ್ಕ ಹಂಚಿಕೊಂಡಿರುತ್ತಾರೆ. ಜೇನು ಕೃಷಿಯಲ್ಲಿ ವಾರ್ಷಿಕ ಆದಾಯ 4 ಲಕ್ಷದಿಂದ 4,50,000 ಲಕ್ಷದವರೆಗೆ ಪಡೆಯುವುದಾಗಿ ತಿಳಿಸಿರುತ್ತಾರೆ.ವಿಶೇಷವಾಗಿ ಅಟ್ಲತುಪ್ಪ ಬೇಡಿಕೆ ಜಾಸ್ತಿಇದ್ದು ಈ ತುಪ್ಪ 1 ಕೆ.ಜಿ 1600-1800 ಮಾರಾಟವಾಗಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ರೈತರಿಹೊಂದು ಸಿಹಿಸುದ್ದಿ :ಪಿರ್ತ್ರಾಜಿತ ಹೆಸರಿನಲ್ಲಿರುವ ಆಸ್ತಿಯನ್ನು ವರ್ಗಾವಣೆ ಹೇಗೆ?

ಪ್ರಗತಿಪರ ರೈತರದ ಶ್ರೀ ಶ್ರೀಕಾಂತ ಶೇಷು ನಾಯ್ಕ ರವರು ತಮ್ಮ 2-30-0 ಜಮೀನಿನಲ್ಲಿ ಮುಂಗಾರಿನಲ್ಲಿ ಭತ್ತದ ಬೆಳೆಗಳಲ್ಲಿ ಹಾಗೂ ಹಿಂಗಾರಿನಲ್ಲಿ ಶೇಂಗಾ ಬೆಳೆಗಳಲ್ಲಿ, ಬೇಸಿಗೆಯಲ್ಲಿ ಕಲ್ಲಂಗಡಿ ಬೆಳೆಗಳಲ್ಲಿ ಜೇನುಪೆಟ್ಟಿಗೆಯನ್ನು ಅಳವಡಿಸಿ ತಮ್ಮ ಜಮೀನಿನಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚಿನ ಇಳುವರಿ ಯನ್ನು ಪಡೆಯುತ್ತಿರುತ್ತಾರೆ. ಇಷ್ಟೆ ಅಲ್ಲದೆ ಊರಿನಲ್ಲಿ ಮತ್ತು ಅಕ್ಕ-ಪಕ್ಕದ ಊರಿನಲ್ಲಿ ಜೇನು ಕೃಷಿಕರು ತುಪ್ಪ ಬೇರ್ಪಡಿಸಲು ಇವರ ಸಹಾಯ ಪಡೆಯುತ್ತಾರೆ. ಜೇನು ಕೃಷಿ ಬಗ್ಗೆ ಮಾಹಿತಿ ನೀಡಲು ಸಂಘ ಸಂಸ್ಥೆಗಳು ಇವರನ್ನುಆಹ್ವಾನಿಸುತ್ತಾರೆ.

ಶ್ರೀಯುತರಿಗೆ ದೊರೆತ ಪುರಸ್ಕಾರಗಳು:-

  1. ಇವರ ಸಾಧನಯನ್ನು ಗಮನಿಸಿದ ಕೃಷಿ ಇಲಾಖೆ 2020-21ನೇ ಸಾಲಿನಲ್ಲಿ ತಾಲೂಕ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಿದೆ.
  2. ಅಂಕೋಲ ಜೇನು ವ್ಯವಸಾಯಗಾರರ ಮತ್ತು ಗ್ರಾಮಾಂತರ ಕೈಗಾರಿಕಾ ಸಹಕಾರಿ ಸಂಘ ಅಂಕೋಲಾ ರವರ ಪ್ರಶಸ್ತಿ.
  3. ಜಿಲ್ಲಾ ಮಟ್ಟದ ಯುವಜನ ಮೇಳ ಪ್ರಶಸ್ತಿ
  4. ತಾಲೂಕ ಮಟ್ಟದ ಯುವಜನ ಮೇಳ ಪ್ರಶಸ್ತಿ
  5. ಸಾಕ್ಷರತಾ ಜ್ಞಾನ ವಾಹಿನಿ ಸಮಿತಿ ಪ್ರಶಸ್ತಿ
  6. ಬೆಳಗಾಂ ವಿಭಾಗ ಮಟ್ಟದ ಯುವಜನ ಪ್ರಶಸ್ತಿ

ಸಾಧಕ ರೈತರಿಂದ ಇತರ ರೈತರಿಗೆ ನೀಡಬಹುದಾದ ಸಲಹೆಗಳು:-

  1. ಕೃಷಿಯಲ್ಲಿ ಮೊದಲು ನಾನು ಕೂಡ ಬೇರೆಯವರಂತೆ ಹಳೆ ಪದ್ದತಿಯನ್ನು ಅನುಸರಿಸಿ ಕೃಷಿಯಲ್ಲಿ ಕಡಿಮೆ ಆದಾಯ ಪಡೆಯುತ್ತಿದ್ದೆ. ನಾನು ಯಾವಾಗ ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳು ಹಮ್ಮಿಕೊಂಡ ಪ್ರವಾಸ ಮತ್ತು ತರಬೇತಿಗಳಲ್ಲಿ ಭಾಗವಹಿಸಿ ತಾಂತ್ರಿಕ ಮಾಹಿತಿ ಪಡೆದು ತನ್ನ ಜಮೀನಿನಲ್ಲಿ ಭತ್ತದಲ್ಲಿ ಸಾಲು ನಾಟಿ, ಮಷೀನ್ ನಾಟಿ ಹಾಗೂ ಶೇಂಗಾ ದಲ್ಲಿ ಏರುಮಡಿ, ಕಲ್ಲಂಗಡಿಯಲ್ಲಿ ಮಲ್ಚಿಂಗ್ ಮತ್ತು ಹನಿ ನೀರಾವರಿ ಅಳವಡಿಸಿ ಎಲ್ಲಾ ಬೆಳೆಗಳಲ್ಲಿ ಜೇನುಪೆಟ್ಟಿಗೆ ಅಳವಡಿಕೆ, ಮಾಡಿಕೊಂಡು ಹೆಚ್ಚಿನ ಇಳುವರಿ ಪಡೆಯಲು ಸಹಾಯವಾಗಿದೆ.
  2. ಇದಲ್ಲದೇ ಇಲಾಖೆಗಳಿಂದ ತರಬೇತಿಯನ್ನು ಪಡೆದು ತಂತ್ರಜ್ಞಾನಗಳನ್ನು ನೋಡಿ ಜಮೀನಿನಲ್ಲಿ ಪ್ರಯೋಗ ಮಾಡುತ್ತಾ ಒಳ್ಳೆಯ ಕೃಷಿಯನ್ನು ಮಾಡುತ್ತಿದ್ದೇನೆ.
  3. ಕೃಷಿಯಲ್ಲಿ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳಲು ಕೃಷಿ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳ ಸಲಹೆ ಸೂಚನೆ ನನಗೆ ಹೆಚ್ಚಿನ ಲಾಭ ಬರಲು ಕಾರಣವಾಗಿದೆ.
  4. ಮನೆಯಲ್ಲಿ ಇರುವ ಎಲ್ಲಾ ಸದಸ್ಯರು ಜಮೀನಿನಲ್ಲಿ ದುಡಿದರೆ ಆರೋಗ್ಯವು ಉತ್ತಮವಾಗಿರುತ್ತದೆ ಮತ್ತು ಕೂಲಿ ಆಳುಗಳ ಸಮಸ್ಯೆಯೂ ಕಡಿಮೆಯಾಗುತ್ತದೆ.
  5. ಕೃಷಿ ಜೊತೆಗೆ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡರೆ ಹೆಚ್ಚಿನ ಲಾಭವನ್ನು ಗಳಿಸುವುದರ ಜೊತೆಗೆ ವರ್ಷಪೂರ್ತಿ ಆರ್ಥಿಕವಾಗಿ ಸದೃಢರಾಗಿರುತ್ತೇವೆ. ಮತ್ತು ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿಯನ್ನು ತಪ್ಪಿಸಬಹುದು ಎಂದು ಇತರೆ ರೈತರಿಗೆ ತಮ್ಮ ಅನುಭವವನ್ನು ಹೇಳಿರುತ್ತಾರೆ.

ಇತ್ತೀಚಿನ ಸುದ್ದಿಗಳು

Related Articles