- ಕೀಟನಾಶಕಗಳ ಸಿಂಪರಣೆಯನ್ನು ಮುಂಜಾನೆ(11 ಗಂಟೆಯ ತನಕ) ಮತ್ತು ಸಂಜೆ ಸಮಯದಲ್ಲಿ( 3 ಗಂಟೆಯ ನಂತರ) ಮಾತ್ರ ಮಾಡಬೇಕು.
- ಸಿಂಪರಣಾ ಯಂತ್ರದ ನಾಜಲ್ ( nozzle ) ಗೆ ಏನಾದರೂ ಸಿಕ್ಕಿ ಹಾಕಿಕೊಂಡು ತೊಂದರೆಯಾದಲ್ಲಿ ಬಾಯಿಂದ ಸರಿಪಡಿಸಲು ಪ್ರಯತ್ನಿಸಬಾರದು.
- ತರಕಾರಿ, ಹಣ್ಣು ಬೆಳೆಗಳ ಮೇಲೆ ಸಿಂಪರಣೆ ಮಾಡುವಾಗ ಮಾಗಿರುವ ಅಥವಾ ಕೊಯ್ಲಿಗೆ ಬಂದಿರುವ ಹಣ್ಣು-ತರಕಾರಿಗಳನ್ನು ಕಟಾವು ಮಾಡಿದ ನಂತರ ಸಿಂಪರಣಾ ಕಾರ್ಯ ಕೈಗೆತ್ತಿಕೊಳ್ಳಬೇಕು. ನಿರ್ದಿಷ್ಟ ಸಿಂಪರಣೆಯ ನಂತರ ಗಡುವು ಮಾಡಿದ ನಿರೀಕ್ಷಣಾ ಸಮಯ ( Waiting period )ಮುಗಿದ ಮೇಲೆಯೇ ಸಿಂಪರಣೆಗೆ ಒಳಪಟ್ಟ ಗಿಡಗಳಿಂದ ಆಹಾರಪದಾರ್ಥಗಳನ್ನು ಉಪಯೋಗಿಸಬೇಕು.
- ಜೇನುನೊಣ, ದನಕರುಗಳು ಬೆಳೆಯ ಸಮೀಪಕ್ಕೆ ಬರುವ ಸಮಯದಲ್ಲಿ ಸಿಂಪರಣೆ ಮಾಡಬಾರದು.
- ಒಂದೇ ತರಹದ ಕೀಟನಾಶಕಗಳನ್ನು ಅಥವಾ ಒಂದೇ ಪಂಗಡಕ್ಕೆ ಸೇರಿದ ಕೀಟನಾಶಕಗಳನ್ನು ಪದೇಪದೇ ಬಳಸುವುದರಿಂದ ಕೀಟ ಅಥವಾ ರೋಗಾಣುಗಳು ನಿರೋಧಕ ಶಕ್ತಿಯನ್ನು ಪಡೆದುಕೊಳ್ಳುವ ಸಾಧ್ಯತೆಯಿದ್ದು, ಬೇರೆ ಬೇರೆ ಪಂಗಡದ ಮತ್ತು ಬೇರೆ ಬೇರೆ ವಿಧದ ಕೀಟನಾಶಕಗಳನ್ನು ಬಳಸುವುದು ಒಳ್ಳೆಯದು.
- ಸಾಧ್ಯವಾದಷ್ಟು ಮಟ್ಟಿಗೆ ಎರಡು ಕೀಟನಾಶಕಗಳನ್ನು ಮಿಶ್ರಣ ಮಾಡಬಾರದು.
- ಕಳೆನಾಶಕಗಳನ್ನು ಬಳಸಿದ ಮೇಲೆ ಅಂತಹ ಸಿಂಪರಣಾ ಯಂತ್ರಗಳನ್ನು ಚೆನ್ನಾಗಿ ತೊಳೆದು ಶುಚಿಗೊಳಿಸಿದ ನಂತರವೇ ಕೀಟನಾಶಕಗಳ ಬಳಕೆಗೆ ಆ ಯಂತ್ರವನ್ನು ಉಪಯೋಗಿಸಬೇಕು.
- ಸಿಂಪರಣಾ ಯಂತ್ರವನ್ನು ಕಾಲುವೆ, ಕೆರೆಗಳಲ್ಲಿ ತೊಳೆಯಬಾರದು. ಆ ನೀರನ್ನು ಬಳಸುವ ಮನುಷ್ಯ ಪ್ರಾಣಿ-ಪಕ್ಷಿಗಳಿಗೆ ತೊಂದರೆ ತಪ್ಪಿಸಲು ಬೇರೆ ಕಡೆ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಯಂತ್ರಗಳನ್ನು ತೊಳೆಯಬೇಕು.