Thursday, March 13, 2025

ARECANUT DISEASES MANAGEMENT-ಮಳೆ ಪ್ರಾರಂಭಕ್ಕಿಂತ ಮುಂಚೆ ಈ ಕ್ರಮಗಳನ್ನುಅನುಸರಿಸಿದರೆ ಅಡಿಕೆ ಬೆಳೆಗೆ ಬರುವ ಕೊಳೆ ರೋಗ ಮತ್ತು ಎಲೆಚುಕ್ಕೆ ರೋಗವನ್ನು ನಿರ್ವಹಣೆ ಮಾಡಬಹುದು!

ತೋಟಗಾರಿಕೆ ಬೆಳೆಗಳಲ್ಲಿ ಅಡಿಕೆ ಒಂದು ವಾಣಿಜ್ಯ ಬೆಳೆಯಾಗಿದೆ. ಕರ್ನಾಟಕ ರಾಜ್ಯದಲ್ಲಿ ಪ್ರಮುಖವಾಗಿ ಅಡಿಕೆ ಬೆಳೆಯುವ ಜಿಲ್ಲೆಗಳೆಂದರೆ ಉತ್ತರ ಕನ್ನಡ, ಶಿವಮೊಗ್ಗ, ತುಮಕೂರು, ದಕ್ಷಿಣ ಕನ್ನಡ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಂಗಳೂರು ಜಿಲ್ಲೆಗಳು.

ಅಡಿಕೆ ಬೆಳೆ ಚೆನ್ನಾಗಿ ಫಸಲಿಸುವಲ್ಲಿ ಹಲವಾರು ರೋಗಗಳು ಅಡ್ಡಿಯನ್ನುಂಟು ಮಾಡುತ್ತವೆ. ಸುಮಾರು ರೋಗಗಳು ಈ ಬೆಳೆಗೆ ಹಾನಿಯನ್ನುಂಟು ಮಾಡುತ್ತವೆ ಅದರಲ್ಲಿ ಮುಖ್ಯವಾಗಿ ಅತೀ ಹೆಚ್ಚು ಕಂಡು ಬರುವ ರೋಗಗಳ ಹತೋಟಿ ಕ್ರಮಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ.

ಅಡಿಕೆ ಬೆಳೆಯು ಈ ಮೇಲೆ ತಿಳಿಸಿದ ಜಿಲ್ಲೆಗಳಲ್ಲಿ ಹೆಚ್ಚಾಗಿ ಬೆಳೆಯುತ್ತಿದ್ದು ಅಲ್ಲಿನ ರೈತರಿಗೆ ಅದರಿಂದಲೇ ಹೆಚ್ಚಿನ ಆದಾಯ ಬರುತ್ತಿದೆ. ಇನ್ನೂ ಕೆಲವು ಸಮಯಗಳಲ್ಲಿ ರೋಗಗಳಿಗೆ ತುತ್ತಾಗಿ ರೈತರಿಗೆ ಆದಾಯ ನಷ್ಟವಾಗುವ ಸಂಭವವಿರುತ್ತದೆ. ಹಾಗಾಗಿ ರೈತರು ಅಡಿಕೆ ಬೆಳೆಗೆ ಬರುವ ರೋಗಗಳಿಗೆ ಸರಿಯಾದ ಸಮಯಕ್ಕೆ ಔಷಧಗಳನ್ನು ಸಿಂಪಡಿಸಿದರೆ ನಷ್ಟವನ್ನು ತಪ್ಪಿಸಬಹುದು.

ಇದನ್ನೂಓದಿ: ಜಾನುವಾರುಗಳಿಗೆ ತಪ್ಪದೇ ಹಾಕಿಸಬೇಕಾದ ಲಸಿಕೆಗಳು ಅದರ ಮಾಹಿತಿ ಇಲ್ಲಿದೆ ನಿಮಗಾಗಿ.

ಅಡಿಕೆ ಬೆಳೆಗೆ ಬರುವ ಮುಖ್ಯವಾದ ರೋಗಗಳು:

1)ಎಲೆ ಚುಕ್ಕೆ ರೋಗ: ಈ ರೋಗ ಬಂದ ಅಡಿಕೆ ಗಿಡಗಳಲ್ಲಿ ಪ್ರಾರಂಭದಲ್ಲಿ ಎಲೆಗಳ ಮೇಲೆಲ್ಲಾ ಸಣ್ಣ ಗಾತ್ರದ ಹಳದಿ ಇಲ್ಲವೇ ಕಂದು ಬಣ್ಣದ ಚುಕ್ಕೆಗಳು ಕಾಣಿಸಿಕೊಂಡು ದಿನ ಕಳೆದಂತೆಲ್ಲಾ ದೊಡ್ಡದಾಗುತ್ತಾ ಎಲೆಗಳು ಸುಟ್ಟಂತೆ ಕಾಣಿಸಲು ಪ್ರಾರಂಬಿಸುತ್ತವೆ. ಇತ್ತಿಚಿನ ದಿನಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದು ಅಡಿಕೆ ಬೆಳೆಗೆ ಹಾನಿ ಉಂಟು ಮಾಡಿದೆ.

ನಿರ್ವಹಣೆ ಕ್ರಮಗಳು:ರೋಗದ ಲಕ್ಷಣಗಳು ಕಂಡ ಕೂಡಲೇ  ಶೇ.1 ಬೋರ್ಡೋ ಮಿಶ್ರಣ ಅಥವಾ 2 ಗ್ರಾಂ ಮ್ಯಾಂಕೋಜೆಬ್‌ ಅಥವಾ 3ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್‌ ಅಥವಾ ಹೆಕ್ಸಾಕೋನಜೋಲ್‌ ಔಷಧವನ್ನು 1/ಮಿ.ಲೀ ಪ್ರತಿ ಲೀಟರ್‌ ನೀರಿಗೆ ಬೆರೆಸಿ ಸಿಂಪಡಿಸಬೇಕು.

2)ಕೊಳೆ ರೋಗ: ಈ ರೋಗವು ಮಳೆಗಾಲದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಅಡಿಕೆ ಬೆಳೆಗೆ ಈ ಕೊಳೆರೋಗವು 19ನೇ ಶತಮಾನದಿಂದಲು ಕಂಡುಬರುತ್ತಿದೆ. ಈ ರೋಗವು ಕಂಡು ಬಂದಾಗ ಮೊದಲಿಗೆ ಕಾಯಿಗಳ ಮೇಲೆ, ತೊಟ್ಟಿನ ಕೆಳ ಭಾಗದಲ್ಲಿ ಎಳೆಯ ಕಾಯಿಗಳ ಮೇಲೆ ಎಣ್ಣೆಯಿಂದ ಒದ್ದೆಯಾದಂತಹ ಕಂದು ಬಣ್ಣದ ಮಚ್ಚೆಗಳು ಕಾಣಿಸಿಕೊಳ್ಳುವವು. ಅವಾಗ ಎಳೆಯ ಕಾಯಿಗಳು ತೊಟ್ಟಿನಿಂದ ಕಳಚಿ ಕೆಳಗೆ ಬಿದ್ದು ಅಪಾರ ಹಾನಿಯನ್ನುಂಟು ಮಾಡುತ್ತದೆ. ರೋಗವು ತೀವ್ರವಾದಾಗ ಕಾಯಿಗಳ ಮೇಲೆ ಬೂದು ಬಣ್ಣದ ಶಿಲೀಂಧ್ರವನ್ನು ಕಾಣಬಹುದು.

ನಿರ್ವಹಣೆ ಕ್ರಮಗಳು:ಬಸಿಗಾಲುವೆಗಳನ್ನು ಮಾಡುವುದು. ರೋಗ ಪೀಡಿತ ಕಾಯಿಗಳನ್ನು ಆರಿಸಿ ಸುಡಬೇಕು. ತೋಟಗಳಲ್ಲಿ ನೀರು ಜಾಸ್ತಿ ನಿಲ್ಲದ ಹಾಗೆ ನೋಡಿಕೊಳ್ಳಬೇಕು. ಬೇವಿನ ಹಿಂಡಿ 1ಕೆ.ಜಿ ಮತ್ತು ಜೈವಿಕ ಶಿಲೀಂಧ್ರನಾಶಕವಾದ ಟ್ರೈಕೋಡರ್ಮಾ50ಗ್ರಾಂ ವನ್ನು ಇತರೆ ಸಾವಯವ ಗೊಬ್ಬರದ ಜೊತೆಗೆ ಮುಂಗಾರಿನ ಪೂರ್ವದಲ್ಲಿ ಪ್ರತಿ ಗಿಡಕ್ಕೆ ಬೆರೆಸಿ ಕೊಡುವುದರಿಂದ ಗಿಡಗಳಲ್ಲಿ ರೋಗ ನಿರೋಧ ಶಕ್ತಿ ಬೆಳೆಯುತ್ತದೆ. ಶೇ.1 ರ ಬೋರ್ಡೋ ದ್ರಾವಣ ಅಥವಾ ಶೇ.0.3 ರ ತಾಮ್ರದ ಆಕ್ಸಿಕ್ಲೋರೈಡ್‌ ದ್ರಾವಣವನ್ನು 3 ಗ್ರಾಂ ಪ್ರತಿ ಲೀಟರ್‌ ನೀರಿಗೆ  ಮುಂಗಾರಿನ ಪ್ರಾರಂಭದಲ್ಲಿ ಒಂದು ಬಾರಿ ಮತ್ತು 40-45 ದಿನಗಳ ಅಂತರದಲ್ಲಿ ಎರಡು ಬಾರಿ ಸುಳಿ ಹೂ ಗೊಂಚಲು ಮತ್ತು ಕಾಯಿಗಳಿಗೆ ಚೆನ್ನಾಗಿ ತೊಯ್ಯುವಂತೆ ಸಿಂಪರಣೆ ಮಾಡಬೇಕು.

ಇದನ್ನೂ ಓದಿ: ಕೃಷಿ ಇಲಾಖೆಯಲ್ಲಿ ಬಿತ್ತನೆ ಬೀಜಗಳನ್ನು ಪಡೆಯಬೇಕಾದರೆ ಈ ಕೆಲಸ ಮಾಡುವುದು ಕಡ್ಡಾಯ!

3)ಹಳದಿ ಎಲೆ ರೋಗ: ಪ್ರಾರಂಭದಲ್ಲಿ ಸುಳಿ ಎಲೆಗಳು ಹಳದಿ ಬಣ್ಣಕ್ಕೆ ಮಾರ್ಪಡುತ್ತವೆ. ದಿನ ಕಳೆದಂತೆ ಎಲೆಗಳು ಕ್ಷಯಿಸುವಿಕೆ ಕಾಣುತ್ತದೆ. ತುದಿ ಎಲೆಗಳಿಂದ ಒಣಗುತ್ತಾ ಬರುತ್ತದೆ.

ನಿರ್ವಹಣೆ ಕ್ರಮಗಳು:ಈ ರೋಗವನ್ನು ಸಸ್ಯ ಸಂರಕ್ಷಣೆ ಕ್ರಮಗಳಿಂದ ನಿಯಂತ್ರಿಸಲು ಸಾಧ್ಯವಿಲ್ಲ. ಬೇಸಿಗೆಯಲ್ಲಿ ನೀರನ್ನು ಕೊಟ್ಟು ಉತ್ತಮ ನಿರ್ವಹಣೆ ಕ್ರಮಗಳನ್ನು ಅನುಸರಿಸುವುದು. ಶಿಫಾರಸ್ಸು ಮಾಡಿದ ಗೊಬ್ಬರಗಳನ್ನು ಹಾಗೂ ಲಘು ಪೋಷಕಾಂಶಗಳನ್ನು ಒದಗಿಸುವುದು. ಹಸಿರೆಲೆ ಗೊಬ್ಬರ ಮತ್ತು ತಿಪ್ಪೆಗೊಬ್ಬರ ಸಾಕಷ್ಟು ಪ್ರಮಾಣದಲ್ಲಿ ಒದಗಿಸಬೇಕು.

ವಿಶೇಷ ಸೂಚನೆ: ಈ ರೋಗಗಳ ಇನ್ನೂ ಹೆಚ್ಚಿನ ಮಾಹಿತಿಗೆ ನಿಮ್ಮ ಹತ್ತಿರದ ತೋಟಗಾರಿಕೆ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರಗಳನ್ನು ಭೇಟಿ ಮಾಡಿ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಇತ್ತೀಚಿನ ಸುದ್ದಿಗಳು

Related Articles