Wednesday, March 19, 2025

ರೇಷ್ಮೆ ಇಲಾಖೆ ಕಾರ್ಯಕ್ರಮಗಳ ಬಗ್ಗೆ ಮಾಹಿತಿ

ರೇಷ್ಮೆ ಕೃಷಿ ಒಂದು ಪ್ರಮುಖ ಗ್ರಹ ಕೈಗಾರಿಕೆಯಾಗಿದೆ. ರೇಷ್ಮೆ ಕೃಷಿ ಅನೇಕ ರೈತರಿಗೆ ಕೃಷಿ ಕಾರ್ಮಿಕರಿಗೆ ಉದ್ಯೋಗ ಒದಗಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಕಡಿಮೆ ಜಾಗದಲ್ಲಿ, ಕಡಿಮೆ ಅವಧಿಯಲ್ಲಿ ಮತ್ತು ಕಡಿಮೆ ಬಂಡವಾಳದಲ್ಲಿ ಹೆಚ್ಚಿನ ಲಾಭ ನೀಡುವ ಬೆಳೆ ರೇಷ್ಮೆ ಬೆಳೆಯಾಗಿದೆ. ಇತರೆ ಬೆಳೆಗಳಿಗೆ ಹೋಲಿಸಿದರೆ ಪ್ರತಿವರ್ಷಕ್ಕೆ ಐದು ಬೆಳೆ ಮಾಡಿ ಆರ್ಥಿಕ ಅಭಿವೃದ್ಧಿ ಹೊಂದಬಹುದಾಗಿದೆ.

ಜಿಲ್ಲೆಯಲ್ಲಿ ರೇಷ್ಮೆ ಕೃಷಿ ಅಭಿವೃದ್ಧಿಗೆ ಪ್ರೋತ್ಸಾಹ ನೀಡುವ ದಿಸೆಯಲ್ಲಿ  ರಾಜ್ಯ ಮತ್ತು ಕೇಂದ್ರ ಸರಕಾರಗಳ ಸಹಯೋಗದಲ್ಲಿ  ಕೆಟಲಿಟಿಕ್  ಅಭಿವೃದ್ಧಿ ಯೋಜನೆ, ರೇಷ್ಮೆ ವರದಾನ ಯೋಜನೆ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ಜಿಲ್ಲಾ ವಲಯದ ಜಿಲ್ಲಾ ಪಂಚಾಯತ್ ಹಾಗೂ ತಾಲೂಕಾ  ಪಂಚಾಯತ್ ಯೋಜನೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ,  ಆತ್ಮ ಯೋಜನೆ, ವಿಶೇಷವಾಗಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಮಹಿಳೆಯರು, ಹಿಂದುಳಿದ ವರ್ಗ, ಸಣ್ಣ,/ ಅತಿ ಸಣ್ಣ ರೈತರಿಗೆ ವಿಶೇಷ ಸವಲತ್ತುಗಳನ್ನು ಈ  ಕಾರ್ಯಕ್ರಮಗಳ ಅಡಿಯಲ್ಲಿ ಒದಗಿಸಲಾಗುವುದು.  

ಈ ಯೋಜನೆಗಳ ಸಂಕ್ಷಿಪ್ತ ವಿವರಗಳನ್ನು ರೇಷ್ಮೆ ಕೃಷಿಕರ ಮಾಹಿತಿ ಒದಗಿಸಲಾಗಿದೆ. ರೇಷ್ಮೆ ಬೆಳೆಗಾರರು ಇದರ ಸದುಪಯೋಗಪಡಿಸಿಕೊಂಡು ತಮ್ಮ ಆರ್ಥಿಕ ಅಭಿವೃದ್ಧಿ ಹೊಂದಲು ಕೋರಲಾಗಿದೆ.

ಇಲಾಖಾ  ಕಾರ್ಯಕ್ರಮಗಳ ವಿವರ:

1. ಜಿಲ್ಲಾ ಪಂಚಾಯತ್ ಕಾರ್ಯಕ್ರಮಗಳು:

ಅ) ಸಲಹಾ ಸೇವೆಗಳು, ಕ್ಷೇತ್ರೋತ್ಸವ/ ವಿಚಾರ ಸಂಕಿರಣ,  ಪ್ರಾತ್ಯಕ್ಷತೆ, ಪ್ರಚಾರ, ದೃಶ್ಯ, ಶ್ರವಣ: ಯೋಜನೆಯಡಿಯಲ್ಲಿ ಪ್ರತಿ ತಾಲೂಕಿನ ವ್ಯಾಪ್ತಿಯಲ್ಲಿ ಕ್ಷೇತ್ರೋತ್ಸವ/ ವಿಚಾರ ಸಂಕಿರಣಗಳನ್ನು  ತಾಂತ್ರಿಕ ಸಲಹೆ ಮಾರ್ಗದರ್ಶನಗಳನ್ನು  ರೇಷ್ಮೆ ಬೆಳೆಗಾರರಿಗೆ ಹಾಗೂ ಇತರೆ ರೈತರಿಗೆ ರೇಷ್ಮೆ ಕೈಗೊಳ್ಳಲು ಪ್ರೋತ್ಸಾಹ ನೀಡಲು ಅವಕಾಶ ಕಲ್ಪಿಸಲಾಗಿದ್ದು ಈ ಕುರಿತು ಗುರಿ ಹಾಕಿಕೊಳ್ಳಲಾಗಿದೆ. ಇದರೊಂದಿಗೆ 12 ವಸ್ತುಪ್ರದರ್ಶನ, ವಸ್ತು ಪ್ರದರ್ಶನ ಅಳವಡಿಕೆ-1, ರೇಷ್ಮೆ ವ್ಯವಸಾಯದ ಕುರಿತು ಮತ್ತು ದೊರಕುವ ಸೌಲಭ್ಯಗಳ ಕೈಪಿಡಿ ಮುದ್ರಣ  ಹಾಗೂ ಅಧ್ಯಯನ ಪ್ರವಾಸಗಳನ್ನು ಹಮ್ಮಿಕೊಳ್ಳಲಾಗಿದೆ.

ಆ) ದ್ವಿತಳಿ ರೇಷ್ಮೆಗೂಡಿಗೆ ಪ್ರೋತ್ಸಾಹಧನ:

ಈ ಯೋಜನೆಯಡಿಯಲ್ಲಿ ಗುಣಮಟ್ಟ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ರೈತರು ಬೆಳೆಯುವ ದ್ವಿತಳಿ ರೇಷ್ಮೆ ಗೂಡಿಗೆ 100  ಹೊಟ್ಟೆಗೆ 60 ಕೆಜಿ ಅಥವಾ ಅದಕ್ಕಿಂತ ಹೆಚ್ಚಿನ ಇಳುವರಿ ಪಡೆದ ರೇಷ್ಮೆ ಬೆಳೆಗಾರರಿಗೆ ಗರಿಷ್ಠ ರೂ.40 ರಂತೆ  ಪ್ರೋತ್ಸಾಹಧನ ನೀಡಲಾಗುವುದು. ಅದೇ ರೀತಿಯಾಗಿ ಪ್ರತಿ ಕೆಜಿ ಮಿಶ್ರತಳಿ ರೇಷ್ಮೆಗೂಡಿಗೆ ಗರಿಷ್ಠ ರೂ10 ನ್ನು  ಹಾಗೂ ಸಂಕರಣ ತಳಿ ಪ್ರತಿ ಕೆಜಿ  ರೇಷ್ಮೆಗೂಡಿಗೆ ಗರಿಷ್ಟ ರೂ.40  ರಂತೆ ಪ್ರೋತ್ಸಾಹಧನ ನೀಡುವ ಕಾರ್ಯಕ್ರಮವಿರುತ್ತದೆ.

ಉತ್ಪಾದಿಸಿದ ರೇಷ್ಮೆ ಗೂಡನ್ನು ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆಗಳಲ್ಲಿ ಮಾರಾಟ ಮಾಡಿರಬೇಕು. ಇದನ್ನು ಸಂಬಂಧಿಸಿದ ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆ ಅಧಿಕಾರಿಗಳು ದೃಢೀಕರಿಸಿರಬೇಕು. ರೇಷ್ಮೆಗೂಡು ಮಾರಾಟ ಮಾಡಿದ 30 ದಿನಗಳ ಒಳಗಾಗಿ ಪ್ರೋತ್ಸಾಹ ಧನ ಪಡೆಯಲು ಪ್ರಸ್ತಾವನೆಯನ್ನು ಸಲ್ಲಿಸಬೇಕು. ರೇಷ್ಮೆ ಗೂಡು ಬೆಳೆದು ಮಾರಾಟ ಮಾಡಿರುವ ಬಗ್ಗೆ ಸಂಬಂಧಿಸಿದ ಕ್ಷೇತ್ರ ಮಟ್ಟದ ವಿಸ್ತರಣಾಧಿಕಾರಿಗಳಿಂದ  ಪ್ರೋತ್ಸಾಹ ಧನ ಪಡೆಯಲು  ಶಿಫಾರಸ್ಸು ಪಡೆಯುವುದು.

ಇ)  ಕ್ಷೇತ್ರಗಳು:

ಈ ಕಾರ್ಯಕ್ರಮದಲ್ಲಿ  ಹಳಿಯಾಳ ತಾಲೂಕಿನ  ಬಾಣಸಗೇರಿಯಲ್ಲಿರುವ ರೇಷ್ಮೆ  ಕೃಷಿ ಕ್ಷೇತ್ರದಲ್ಲಿ 1.00  ಲಕ್ಷ ಹಿಪ್ಪುನೇರಳೆ ಸಸಿಗಳನ್ನು ಬೆಳೆಸಿ ರೈತರಿಗೆ ಉಚಿತವಾಗಿ ನೀಡುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ.

ತಾಲೂಕಾ ಪಂಚಾಯತ್ ಕಾರ್ಯಕ್ರಮಗಳು:

ಈ ಕಾರ್ಯಕ್ರಮದಲ್ಲಿ ತಾಲೂಕ ಮಟ್ಟದಲ್ಲಿ ರೇಷ್ಮೆ ಬೆಳೆಗಾರರಲ್ಲಿ ಅತಿ ಹೆಚ್ಚಿನ ಉತ್ಪಾದನೆ/ ಉತ್ಪಾದಕತೆ   ಆಧರಿಸಿ ಪ್ರೋತ್ಸಾಹವನ್ನು ತಾಲೂಕುಮಟ್ಟದಲ್ಲಿ ಪ್ರಶಸ್ತಿ ನೀಡುವ ಕಾರ್ಯಕ್ರಮವಿರುತ್ತದೆ. ಈ ಕುರಿತು ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೇಷ್ಮೆಗೂಡು ಬೆಳೆಯುವ ತಾಲೂಕುಗಳಾದ ಹಳಿಯಾಳ, ಯಲ್ಲಾಪುರ, ಶಿರಸಿ, ಸಿದ್ದಾಪುರ ಮತ್ತು ಕುಮಟಾ 5 ತಾಲೂಕುಗಳಿಗೆ ಪ್ರತಿ ತಾಲೂಕಿಗೆ.10,000 ದಂತೆ ಒಟ್ಟು ರೂ.50,000  ಗಳ ಕಾರ್ಯಕ್ರಮವಿರುತ್ತದೆ. ಪ್ರತಿ ತಾಲೂಕಿಗೆ ನೀಡಿರುವ ರೂ.10,000  ಗಳಲ್ಲಿ ಪ್ರಥಮ ಬಹುಮಾನವೆಂದು ರೂ.5000,  ಎರಡನೇ ಬಹುಮಾನ ರೂ.3000,  ಮೂರನೇ ಬಹುಮಾನ ರೂ.2000 ನೀಡಲಾಗುವುದು.

ಫಲಾನುಭವಿ ಆಯ್ಕೆಯು ರೈತರು 1-00   ಎಕರೆ ಕ್ಷೇತ್ರಕ್ಕೆ  ಚಾಕಿ ಕಟ್ಟಿದ ಮೊಟ್ಟೆ, ಉತ್ಪಾದಿಸಿದ ಗೂಡು ಹಾಗೂ ಪಡೆದ ಆದಾಯವನ್ನು  ಆಧರಿಸಿ ಮಾಡಲಾಗುವುದು.  ತದನಂತರ ಫಲಾನುಭವಿ ಆಯ್ಕೆಯು ಗ್ರಾಮ ಪಂಚಾಯತ ಹಾಗೂ ತಾಲೂಕಾ ಪಂಚಾಯತ ದಿಂದ ಅನುಮೋದನೆ ಆಗಿರಬೇಕು.

ಸಹಾಯಧನ- ಸಾಲ ಸೌಲಭ್ಯ ಪಡೆಯಲು ಅರ್ಹತೆ ಮತ್ತು ಒದಗಿಸಬೇಕಾದ ಮುಖ್ಯ ದಾಖಲಾತಿಗಳು

1. ರೇಷ್ಮೆ ಬೆಳೆಗಾರ ರಾಗಿದ್ದು, ನೋಂದಣಿ ಮಾಡಿರಬೇಕು. ಸ್ವಂತ ಹಿಪ್ಪುನೇರಳೆ ತೋಟ ಹೊಂದಿರಬೇಕು.

2. ಹಿಪ್ಪುನೇರಳೆ ತೋಟ ದಾಖಲಾಗಿರುವ ಪಹಣಿ ಇಲ್ಲದಿದ್ದಲ್ಲಿ ಗ್ರಾಮಲೆಕ್ಕಾದಿಕಾರಿಗಳಿಂದ ರೇಷ್ಮೆ ವ್ಯವಸಾಯ ಕೈಗೊಂಡ ಬಗ್ಗೆ ದೃಢೀಕರಣ ಪತ್ರ ಹೊಂದಿರಬೇಕು.

3. ರೇಷ್ಮೆ ಬೆಳೆಗಾರರು ರೇಷ್ಮೆ ಕೃಷಿಕರ ಪಾಸ್ ಪುಸ್ತಕ ಹೊಂದಿರಬೇಕು.

4. ಸಾಲ ತೀರುವಳಿ ಪತ್ರ, ಪಾಸ್ಪೋರ್ಟ್ ಅಳತೆಯ ಫೋಟೋ, ನೀರಾವರಿ ಸೌಲಭ್ಯ ಪಡೆಯಲು ಸ್ವಂತ ಜಮೀನಿನಲ್ಲಿ ನೀರಾವರಿ ವ್ಯವಸ್ಥೆ ಇರುವ ಕುರಿತು ಬಾವಿ ಸರ್ಟಿಫಿಕೇಟ್ ಹೊಂದಿರಬೇಕು.

5. ನಿಗದಿತ ನಮೂನೆಯಲ್ಲಿ ಅರ್ಜಿ, ಕಾರ್ಯಕ್ರಮ ಪೂರ್ಣಗೊಂಡಿರುವ ಬಗ್ಗೆ ಫೋಟೋ, ಯೋಜನೆ ಅಂದಾಜು  ಮತ್ತು ನಕ್ಷೆ, ಒಪ್ಪಂದ ಪತ್ರ, ಜಾತಿ ಪ್ರಮಾಣ ಪತ್ರ ಇತರೆ ದಾಖಲಾತಿಗಳನ್ನು ಒದಗಿಸಬೇಕು.

ವಿಶೇಷ ಸೂಚನೆ:

ಎಲ್ಲಾ ಯೋಜನೆಗಳು ರೇಷ್ಮೆ ನಿರ್ದೇಶನಾಲಯ ನೀಡುವ ವಾರ್ಷಿಕ ಗುರಿ ಮತ್ತು ಅನುದಾನದ ಲಭ್ಯತೆಯ ಮೇರೆಗೆ ಅನುಷ್ಠಾನಗೊಳಿಸಲಾಗುವುದು.

ಇತ್ತೀಚಿನ ಸುದ್ದಿಗಳು

Related Articles