ಆತ್ಮೀಯ ರೈತ ಬಾಂದವರೇ, ತೋಟಗಾರಿಕೆ ಇಲಾಖೆಯಲ್ಲಿ ರೈತರಿಗಾಗಿ ದೊರೆಯುವ ಯೋಜನೆಗಳು ಮತ್ತು ತೋಟಗಾರಿಕೆ ಬೆಳೆಯ ಹೊಸ ಹೊಸ ತಳಿಯ ಆವಿಷ್ಕಾರಗಳು, ಹೊಸ ತಂತ್ರಜ್ಞಾನಗಳನ್ನು ಜನರಿಗೆ ತಲುಪಿಸುವುದು,ಮತ್ತು ರೈತರನ್ನು ಆದಷ್ಟೂ ಸಾವಯುವ ಕೃಷಿಯತ್ತಾ ಸೆಳೆಯುವುದು, ವಿವಿಧ ತೋಟಗಾರಿಕೆ ಬೆಳೆಗಳನ್ನು ಕಸಿ ಮಾಡುವ ಬಗ್ಗೆ ಹೀಗೆ ಹಲವಾರು ಹೊಸ ಮಾಹಿತಿಯನ್ನು ಜನರಿಗೆ/ಆಸಕ್ತ ರೈತರಿಗೆ ಸಿಗುವ ದೃಷ್ಟಿಯಿಂದ ಸಸ್ಯಸಂತೆಯನ್ನು ಏರ್ಪಡಿಸಲಾಗಿರುತ್ತದೆ.
ಈ ಒಂದು ಕಾರ್ಯಕ್ರಮದಲ್ಲಿ ಹೆಚ್ಚಿನ ರೈತರು ಭಾಗವಹಿಸಿ ಇದರ ಸದುಪಯೋಗ ಪಡೆಯಬೇಕಾಗಿ ತೋಟಗಾರಿಕೆಯ ಅಧಿಕಾರಿಗಳು ತಿಳಿಸಿರುತ್ತಾರೆ.
ತೋಟಗಾರಿಕೆ ಇಲಾಖೆ ರೈತರ ಉಪಯೋಗಕ್ಕಾಗಿ ಕೊಪ್ಪಳದಲ್ಲಿ ಆಗಸ್ಟ್ 15ರಿಂದ 20ರ ತನಕ ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನ-2023 ಆಯೋಜನೆ ಮಾಡಿದೆ. ಇಲಾಖೆ ಯೋಜನೆಗಳ ಬಗ್ಗೆ ಮತ್ತು ಹೊಸ ತಾಂತ್ರಿಕತೆಯನ್ನು ರೈತರಿಗೆ ಮಾಹಿತಿ ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ.
ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕೃಷ್ಣ ಉಕ್ಕುಂದ ಈ ಕುರಿತು ಮಾಹಿತಿ ನೀಡಿದ್ದಾರೆ.
ತೋಟಗಾರಿಕೆ ಇಲಾಖೆಯಿಂದ 2023-24ನೇ ಸಾಲಿನಲ್ಲಿ ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನ-2023 ಅನ್ನು ಆಯೋಜಿಸಲಾಗುತ್ತಿದ್ದು, ಜಿಲ್ಲೆಯ ಸಮಸ್ತ ರೈತರು, ಸಾರ್ವಜನಿಕರು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು” ಎಂದರು.
ಆರು ದಿನಗಳ ಕಾಲ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಈ ಅಭಿಯಾನ ನಡೆಯಲಿದೆ.
ಇದನ್ನೂ ಓದಿ: ಬೆಳೆಸಾಲ ಪಡೆಯಲು ರೈತರ ನೋಂದಣಿ ಸಂಖ್ಯೆ ಪಡೆಯುವ ಸುಲಭ ವಿಧಾನ.
ತೋಟಗಾರಿಕೆ ಇಲಾಖೆಯಿಂದ ಪ್ರಸಕ್ತ ಸಾಲಿನಲ್ಲಿ ಅನೇಕ ರೈತಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ ಅಲ್ಲದೇ ಸರ್ವತೋಮುಖ ಅಭಿವೃದ್ಧಿಗಾಗಿ ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನ ಆಯೋಜನೆ ಮಾಡಲಾಗಿದೆ.
Features of Horticulture Campaign: ತೋಟಗಾರಿಕೆ ಅಭಿಯಾನದ (ಸಸ್ಯಸಂತೆ ) ವಿಶೇಷತೆಗಳು :
ಈ ಅಭಿಯಾನದಲ್ಲಿ ಕೊಪ್ಪಳ ಜಿಲ್ಲೆಯ ರೈತರಿಗೆ ಹಾಗೂ ತೋಟಗಾರಿಕೆ ಬೆಳೆಗಳಲ್ಲಿ ಆಸಕ್ತಿ ಇರುವ ಜನರಿಗೆ ಒಂದೇ ಸೂರಿನಡಿ ತೋಟಗಾರಿಕೆ ಕ್ಷೇತ್ರಗಳಲ್ಲಿ ಉತ್ಪಾದಿಸಿದ ಮಾವು, ತೆಂಗು, ಪೇರಲ, ಚಿಕ್ಕು, ಅಂಜೂರ, ಕರಿಬೇವು, ನುಗ್ಗೆ, ದ್ರಾಕ್ಷಿ ತಳಿಗಳಲ್ಲದೇ ಅನೇಕ ವಿಧದ ಕಸಿ-ಸಸಿಗಳು, ಅಲಂಕಾರಿಕ ಸಸ್ಯಗಳು, ಹೂವಿನ, ತರಕಾರಿ, ಔಷಧೀಯ, ಸಾಂಬಾರು ಸಸ್ಯಗಳು ಇದಲ್ಲದೇ ಅಪ್ರಧಾನ ಹಣ್ಣಗಳಾದ ನೇರಳೆ, ಸೀತಾಫಲ, ಬೀಜ ರಹಿತ ಸೀಬೆ, ಡ್ರಾಗನ್ ಹಣ್ಣು, ಮೆಕಡೋನಿಯಾ, ಮಿಯಾ ಜಾಕಿ ಮಾವು, ಮುಂತಾದ ಸಸ್ಯಗಳನ್ನು ಇಲಾಖೆಯ ಯೋಗ್ಯ ದರದಲ್ಲಿ ಪೂರೈಕೆ ಮಾಡಲಾಗುತ್ತದೆ.
ತೋಟಗಾರಿಕಾ ಇಲಾಖೆ ಯೋಜನೆಗಳ ಬಗ್ಗೆ ರೈತರಿಗೆ ಮಾಹಿತಿ ನೀಡಲಾಗುತ್ತದೆ. ಇಲಾಖೆಯ ತೋಟಗಾರಿಕೆ ಕ್ಷೇತ್ರಗಳಲ್ಲಿ ಉತ್ಪಾದಿಸಿದ ಗುಣ ಮಟ್ಟದ ಸಸಿಗಳು, ಎರೆಹುಳು ಗೊಬ್ಬರ, ಎರೆಜಲ ಹಾಗೂ ಜೈವಿಕ ಗೊಬ್ಬರ, ನೀಮಾಸ್ತ್ರ, ಜೀವಾಮೃತ, ಗೋಕೃಪಾಮೃತ ಮಾರಾಟದ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ.
ವಿವಿಧ ಬ್ಯಾಂಕುಗಳಿಂದ ರೈತರಿಗೆ ದೊರೆಯುವ ಸಾಲ ಸೌಲಭ್ಯಗಳ ಮಾಹಿತಿ ನೀಡಲಾಗುತ್ತದೆ.
ಸಮಗ್ರ ಖುಷಿ ಒಣ ಬೇಸಾಯ, ಅಪ್ರಧಾನ ಹಣ್ಣುಗಳು, ವಿದೇಶಿ ಹಣ್ಣುಗಳು, ಅಲ್ಪಾವಧಿ, ಮಧ್ಯಾಮವಧಿ ಮತ್ತು ದೀರ್ಘಾವಧಿ ತೋಟಗಾರಿಕೆ ಬೆಳೆಗಳು ಹಾಗೂ ಸಮುದಾಯ ತೋಟಗಾರಿಕೆಯಿಂದ ಆಗುವ ಲಾಭಗಳ ಮಾಹಿತಿ ನೀಡಲಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ನೀರಿನ ಅಭಾವ ಬಹಳ ಇರುವ ಕಾರಣಕ್ಕೆ ನೀರಿನ ಮಿತವಾದ ಬಳಕೆಗೆ ಹನಿ ನೀರಾವರಿ ಮತ್ತು ರಸಾವರಿ ತಾಂತ್ರಿಕತೆ, ಇಸ್ರೇಲ್ ಮಾದರಿ ತಾಂತ್ರಿಕತೆ ಹಾಗೂ ತೋಟಗಾರಿಕೆಯಲ್ಲಿ ನವೀನ ತಾಂತ್ರಿಕತೆಗಳ ಬಗ್ಗೆ ಮಾಹಿತಿ ಕೊಡಲಾಗುತ್ತದೆ.
ತೋಟಗಾರಿಕೆ ಆಧಾರಿತ ಉಪಕಸುಬುಗಳಾದ ಜೇನು ಸಾಕಾಣಿಕೆ, ಅಣಬೆ ಬೇಸಾಯ, ತೋಟಗಾರಿಕೆ ಬೆಳೆಗಳ ಮೌಲ್ಯವರ್ಧನೆ ಬಗ್ಗೆ ಮಾಹಿತಿಯನ್ನೂ ನೀಡಲಾಗುವುದು.
ತೋಟಗಾರಿಕೆ ಬೆಳೆ ವಿಮಾ ಬಗ್ಗೆ ಜಾಗೃತಿ, ಕೈ ತೋಟ, ತಾರಸಿ ತೋಟ, ವರ್ಟಿಕಲ್ ತೋಟ ಬಹುಮಹಡಿ ಪದ್ಧತಿಯಲ್ಲಿ ತೋಟಗಾರಿಕೆ ಬೆಳೆಗಳ ಪ್ರಾತ್ಯಕ್ಷತೆ. ತೋಟಗಾರಿಕೆ ಬೆಳೆಗಳ ಸಂಸ್ಕರಣೆ ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಮಾಹಿತಿಯನ್ನು ರೈತರಿಗೆ ನೀಡಲಾಗುತ್ತದೆ.
ಆಸಕ್ತ ರೈತರು ಹೆಚ್ಚಿನ ಮಾಹಿತಿಗಾಗಿ, ಜಿಲ್ಲಾ ತೋಟಗಾರಿಕೆ ಇಲಾಖೆ, ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾ.ವ.) ಕೊಪ್ಪಳ ಇವರನ್ನು ಸಂಪರ್ಕಿಸಬಹುದು. ಮೊಬೈಲ್ ಸಂಖ್ಯೆ 7406504120.