ಆಪ್ ಸೆಣಬು
ಇದನ್ನು ಹಸಿರೆಲೆ ಗೊಬ್ಬರಕ್ಕೆ ಮಾತ್ರವಲ್ಲದೆ ಮೇವು ಹಾಗೂ ನಾರು ತಯಾರಿಸಲು ಉಪಯೋಗಿಸುತ್ತಾರೆ. ಇದು ಶೀಘ್ರವಾಗಿ ಬೆಳೆದು 8-10 ವಾರಗಳಲ್ಲಿ ಎಕರೆಗೆ 5 ರಿಂದ 6 ಸಾವಿರ ಕೆ.ಜಿ. ಯಷ್ಟು ಹಸಿರು ಸೊಪ್ಪನ್ನು ಕೊಡಬಲ್ಲದು. ಒಂದು ಎಕರೆ ಪ್ರದೇಶಕ್ಕೆ ಬಿತ್ತನೆ ಮಾಡಲು ಸುಮಾರು 70 ರಿಂದ 80 ಕೆ.ಜಿ. ಬೀಜ ಬೇಕಾಗುತ್ತದೆ.
ಈ ಬೆಳೆಗಳು ಜೌಗು ಪ್ರದೇಶಗಳಲ್ಲಿ ಚೆನ್ನಾಗಿ ಬರುವುದಿಲ್ಲ. ಈ ಬೆಳೆಯನ್ನು ಬಿತ್ತುವ ಮೊದಲು ಎಕರೆಗೆ 100 ಕೆ.ಜಿ. ಸೂಪರ್ ಫಾಸ್ಪೇಟ್ ಅನ್ನು ಭೂಮಿಗೆ ಸೇರಿಸಿ ಬೀಜವನ್ನು ಬಿತ್ತಿದಲ್ಲಿ ಉತ್ತಮ ಗುಣಮಟ್ಟದ ಗೊಬ್ಬರ ಬರುತ್ತದೆ.
ಡಯಾಂಚ
ಈ ಹಸಿರೆಲೆ ಬೆಳೆಯನ್ನು ಕಪ್ಪು ಮತ್ತು ಕ್ಷಾರ ಭೂಮಿಯಲ್ಲಿ ಯಶಸ್ವಿಯಾಗಿ ಬೆಳೆಯಬಹುದು. ಇದು ಬಹಳ ಬೇಗನೆ ಬೆಳೆಯುವುದರಿಂದ ಬಿತ್ತಿದ ಎರಡು ತಿಂಗಳೊಳಗೆ ಭೂಮಿಗೆ ಸೇರಿಸುವುದು ಒಳ್ಳೆಯದು. ಇಲ್ಲದಿದ್ದಲ್ಲಿ ಕಾಂಡಗಳು ಗಟ್ಟಿಯಾಗಿ ನಾರಿನಂಶ ಹೆಚ್ಚಾಗುತ್ತದೆ. ಹೀಗಾಗಿ ಬೇಗನೆ ಕೊಳೆಯುವುದಿಲ್ಲ.
ಒಂದು ಎಕರೆ ಪ್ರದೇಶಕ್ಕೆ ಬಿತ್ತನೆ ಮಾಡಲು 8 ರಿಂದ 10 ಕೆಜಿ ಬೀಜ ಬೇಕಾಗುತ್ತದೆ. ಹೀಗೆ ಬೆಳೆದ ಬೆಳೆಯಿಂದ 3-4 ಎಕರೆಗಳಿಗೆ ಆಗುವಷ್ಟು ಹಸಿರೆಲೆ ಗೊಬ್ಬರವನ್ನು ಪಡೆದುಕೊಳ್ಳಬಹುದು.
ಸಸ್ಬೇನಿಯಾ (ಅಗಸೆ,ಅಗತಿ)
ಈ ಹಸಿರೆಲೆ ಗೊಬ್ಬರದ ಸಸಿಗಳನ್ನು ಹೊಲ ಮತ್ತು ಗದ್ದೆಗಳ ಬದುಗಳ ಮೇಲೆ ನಾಟಿ ಮಾಡಿ ಬೆಳೆಯುವುದು ಸಾಮಾನ್ಯ ಪದ್ಧತಿ. ಆದರೆ ಪೂರ್ಣ ಬೆಳೆಯಾಗಿ ಬೆಳೆದಲ್ಲಿ 4-6 ತಿಂಗಳಲ್ಲಿ 20,000 ಕೆ.ಜಿ. ಯಷ್ಟು ಹಸಿರೆಲೆ ಯನ್ನು ನೀಡುತ್ತದೆ.
ಈ ಹಸಿರೆಲೆ ಗೊಬ್ಬರದ ವಿಶೇಷವೇನೆಂದರೆ ಹೆಚ್ಚು ಚೌಗಾದ ಪ್ರದೇಶದಲ್ಲಿ ಅಥವಾ ನೀರಿನ ಕೊರತೆ ಇರುವಂತಹ ಪರಿಸ್ಥಿತಿಯಲ್ಲಿ ಹೆಚ್ಚು ಹುಲುಸಾಗಿ ಬೆಳೆಯಬಲ್ಲದು.
ಗ್ಲಿರಿಸಿಡಿಯಾ
ಹಸಿರೆಲೆ ಗೊಬ್ಬರ ಗಳಲ್ಲಿ ಗ್ಲಿರಿಸಿಡಿಯಾ ಬಹಳ ಪ್ರಧಾನವಾದುದು. ಇದು ಬಹು ಶೀಘ್ರವಾಗಿ ಬೆಳೆಯುವ ಒಂದು ಪೊದೆ. ಗ್ಲಿರಿಸಿಡಿಯಾ ಗಿಡಗಳನ್ನು ಬೀಜಗಳಿಂದ ಸಸಿಗಳಿಂದ ಅಥವಾ ಕಾಂಡದ ತುಂಡು ಗಳಿಂದಲೂ ಬೆಳೆಸಬಹುದು.
ಈ ಸಸ್ಯ ಶೀಘ್ರವಾಗಿ ಬೆಳೆದು ಆರು ತಿಂಗಳಲ್ಲಿ ಕೊಯ್ಲಿಗೆ ಬರುತ್ತದೆ. ವರ್ಷಕ್ಕೆ 2-3 ಬಾರಿ ಹಸಿರು ಪದಾರ್ಥವನ್ನು ನೀಡಬಲ್ಲದು. ಭತ್ತದ ಗದ್ದೆಗಳಿಗೆ ಹಸಿರು ಸೊಪ್ಪನ್ನು ಒದಗಿಸುವಂತಹ ಸೊಪ್ಪು ಬಹಳ ಅತ್ಯುತ್ತಮವಾದುದು. ಇದು ಅತಿ ಶೀಘ್ರವಾಗಿ ಕೊಳೆತು ಗೊಬ್ಬರವಾಗುತ್ತದೆ.
ಹೊಂಗೆ
ಹೊಂಗೆ ಬೃಹದಾಕಾರವಾಗಿ ಬೆಳೆಯುವ ಹಾಗೂ ಉತ್ತಮ ಹಸಿರು ಪದಾರ್ಥವನ್ನು ಕೊಡುವ ಒಂದು ಮರ. ಸಾಧಾರಣವಾಗಿ ಸಸಿಯನ್ನು ನೆಟ್ಟ 5-6 ವರ್ಷಗಳ ನಂತರ ಪ್ರತಿ ಮರದಿಂದ ಸುಮಾರು 2000 ಕೆ.ಜಿ. ಹಸಿರೆಲೆಯನ್ನು ಪಡೆಯಬಹುದು. ಅಲ್ಲದೆ ಹೊಂಗೆ ಬೀಜದಿಂದ ಎಣ್ಣೆಯನ್ನು ತೆಗೆಯಲಾಗುತ್ತದೆ.ಹಿಂಡಿಯು ಒಳ್ಳೆಯ ಸಾವಯವ ಗೊಬ್ಬರ. ಈ ಮರಗಳನ್ನು ರೈತರು ಬಂಜರು ಭೂಮಿಯಲ್ಲಿ ಜಮೀನು ಹಾಗೂ ಹಳ್ಳದ ಪಕ್ಕದಲ್ಲಿ ಬೆಳೆದು ಬಳಸಬಹುದು.