ಕೃಷಿಯಲ್ಲಿ ಹಸಿರೆಲೆ ಗೊಬ್ಬರಗಳ ಬಳಕೆ ನೂರಾರು ವರ್ಷಗಳಷ್ಟು ಹಿಂದಿನಿಂದಲೂ ಬಂದ ಪದ್ಧತಿ. ಇದು ಮಣ್ಣು ಫಲವತ್ತತೆ ಮತ್ತು ಬೌತಿಕ ಗುಣಧರ್ಮಗಳನ್ನು ಕಾಪಾಡುವಲ್ಲಿ ಮಹತ್ವದ ಸ್ಥಾನ ಪಡೆದಿದೆ. ಹಸಿರೆಲೆ ಗೊಬ್ಬರವು ಭೂಮಿಗೆ ಮತ್ತು ಬೆಳೆಗೆ ಅವಶ್ಯವಿರುವ ಮುಖ್ಯ ಪೋಷಕಾಂಶಗಳಾದ ಸಾರಜನಕ, ರಂಜಕ ಮತ್ತು ಪೊಟ್ಯಾಷ್ ಗಳನ್ನಲ್ಲದೆ ಇತರ ಲಘು ಸೂಕ್ಷ್ಮ ಪೋಷಕಾಂಶಗಳನ್ನು ಒದಗಿಸುತ್ತದೆ.
*ಹಸಿರೆಲೆ ಗೊಬ್ಬರ ಬೇಸಾಯ* ಅಂದರೆ ಬಲಿಯದ ಸಸ್ಯಗಳು, ಸಸ್ಯದ ಎಲೆಗಳು ಮತ್ತು ಉಳಿದ ಎಳೆಯ ಸಸ್ಯ ಭಾಗಗಳನ್ನು ಉಳುಮೆ ಮಾಡುವ ಮೂಲಕ ಮಣ್ಣಿನಲ್ಲಿ ಬೆರೆಸಿ ಮಣ್ಣು ಫಲವತ್ತತೆಯನ್ನು ಹೆಚ್ಚಿಸುವದಾಗಿದೆ.
1) ಸ್ಥಳದಲ್ಲಿ ಬೆಳೆಯುವ ಹಸಿರು ಗೊಬ್ಬರಗಳು :
ಹಸಿರು ಗೊಬ್ಬರ ಬೆಳೆಯುವ ಸಸ್ಯಗಳನ್ನು ಹೊಲದಲ್ಲಿಯೇ ಬೆಳೆದು ಸ್ಥಳದಲ್ಲಿಯೇ ಮಣ್ಣಿನಲ್ಲಿ ಬೆರೆಸುವ ವಿಧಾನಕ್ಕೆ ಸ್ಥಳದಲ್ಲಿ ಬೆಳೆಯುವ ಹಸಿರು ಗೊಬ್ಬರಗಳು ಎಂದು ಕರೆಯುತ್ತಾರೆ. ಈ ವಿಧಾನದಲ್ಲಿ ಹಸಿರು ಗೊಬ್ಬರ ಬೆಳೆಯ ಬೀಜಗಳನ್ನು ಮುಖ್ಯ ಬೆಳೆಯನ್ನು ಬಿತ್ತುವ ಮೊದಲು ಅಥವಾ ಅದರ ಜೊತೆಗೆ ಬಿತ್ತಬಹುದಾಗಿದೆ. ಸಾಮಾನ್ಯವಾಗಿ ಈ ಹಸಿರು ಗೊಬ್ಬರ ಬೆಳೆಯನ್ನು ಬಿತ್ತನೆ ಮಾಡಿದ 6 ವಾರಗಳ ನಂತರ ಮಣ್ಣಿನೊಂದಿಗೆ ಬೆರೆಸಲಾಗುವುದು. ಇದಕ್ಕೂ ಪೂರ್ವದಲ್ಲಿ ಬೆರೆಸಿದರೆ ಹಸಿರು ಗೊಬ್ಬರದ ಇಳುವರಿ ಕಡಿಮೆಯಾಗುವುದು, ನಂತರ ಬೆರೆಸಿದರೆ ಗೊಬ್ಬರದಲ್ಲಿ ನಾರಿನ ಅಂಶ ಹೆಚ್ಚಾಗಿ ಬೇಗನೆ ಕೊಳೆಯುವದಿಲ್ಲ. ಈ ಹಸಿರೆಲೆ ಗೊಬ್ಬರದ ಬೀಜಗಳನ್ನು ಕೃಷಿ ಇಲಾಖೆಯಲ್ಲಿ ವಿತರಣೆ ಸಹ ಮಾಡಲಾಗುತ್ತದೆ.
ಇದನ್ನೂ ಓದಿ:ಕಂಪ್ಯೂಟರ್ ಟ್ಯಾಲಿ ಉಚಿತ ತರಬೇತಿಗೆ ರುಡ್ ಸೆಟ್ ಸಂಸ್ಥೆವತಿಯಿಂದ ಅರ್ಜಿ ಆಹ್ವಾನ!
ಉದಾಹರಣೆಗಳು:
ಸೆಣಬು, ದಯಂಚಾ, ಚೊಗಚೆ, ಆಲಸಂದಿ, ಸೀಮಾ ಅವರೆ ಮತ್ತು ಹೆಸರು.
2) ಹಸಿರೆಲೆ ಗೊಬ್ಬರಗಳು :ಈ ವಿಧಾನದಲ್ಲಿ ಬೇರೆ ಸ್ಥಳದಲ್ಲಿ ಲಭ್ಯವಿರುವ ಬಹುವಾರ್ಷಿಕ ಸಸ್ಯಗಳ ಹಸಿರೆಲೆಗಳನ್ನು ಕಟಾವು ಮಾಡಿ ತಂದು ಮಣ್ಣಿನಲ್ಲಿ ಬೆರೆಸುತ್ತಾರೆ. ಈ ವಿಧಾನದಲ್ಲಿ ಹೊಲದ ಬದುಗಳಲ್ಲಿ ಅಥವಾ ಇತರ ಸಮೀಪದ ಸ್ಥಳದಲ್ಲಿ ಈ ಬೆಳೆಗಳನ್ನು ಬೆಳೆಯುತ್ತಾರೆ.
ಉದಾ : ಗ್ಲಿರಿಸಿಡಿಯಾ, ಹೊಂಗೆ, ಸುಬಾಬುಲ್
*ಹಸಿರೆಲೆ ಗೊಬ್ಬರದ ಲಾಭಗಳು :
1) ಈ ವಿಧಾನದಲ್ಲಿ ಭೂಮಿಗೆ ಅಧಿಕ ಪ್ರಮಾಣದಲ್ಲಿ ಪೋಷಕಾಂಶಗಳು ದೊರೆಯುತ್ತವೆ. ಮತ್ತು ಮಣ್ಣಿನ ಭೌತಿಕ, ರಸಾಯನಿಕ ಮತ್ತು ಜೈವಿಕ ಗುಣಧರ್ಮಗಳು ಸುಧಾರಿಸುತ್ತವೆ.
2) ಹಸಿರೆಲೆ ಗೊಬ್ಬರ ಕೊಳೆಯುವ ಸಂದರ್ಭದಲ್ಲಿ ಉತ್ಪನ್ನವಾದ ಆಮ್ಲಗಳು, ರಂಜಕ ಸಸ್ಯಗಳಿಗೆ ದೊರೆಯುವಂತೆ ಪರಿವರ್ತಿಸಲು ನೆರವಾಗುತ್ತವೆ.
3) ಹಸಿರೆಲೆ ಗೊಬ್ಬರ ಸಾರಜನಕ ಸ್ಥಿರಿಕರಿಸಿ ಬೆಳೆಗಳಿಗೆ ಸಹಕಾರ ನೀಡಬಲ್ಲವು
4) ಈ ಬೆಳೆಗಳು ಭೂಮಿಯ ಆಳವಾದ ಪೊದರಿನಲ್ಲಿರುವ ಪೋಷಕಾಂಶಗಳನ್ನು ಹೀರಿಕೊಂಡು ಮೇಲ್ಮಣ್ಣಿನಲ್ಲಿ ಸೇರಿಸಿ- ವಾರ್ಷಿಕ ಬೆಳೆಗಳ ಪೋಷಕಾಂಶ ನಿರ್ವಹಣೆಯಲ್ಲಿ ನೆರವಾಗುತ್ತವೆ.
5) ಇದೊಂದು ಕಡಿಮೆ ಖರ್ಚಿನ ಲಾಭದಾಯಕ ಬೇಸಾಯ ಕ್ರಮ ಎನಿಸಿದೆ.
ಇದನ್ನೂ ಓದಿ:ರೈತರ ನೋಂದಣಿ ಎಲ್ಲಿ ಮಾಡಿಸಬೇಕು ಮತ್ತು ಅದರ ಪ್ರಯೋಜನಗಳು!