ಹೌದು, ರೈತ ಭಾಂದವರೇ ಈಗ ನಾವು ತಾಂತ್ರಿಕತೆ(technology) ಯುಗದಲ್ಲಿ ಇರುವುದರಿಂದ ನಮಗೆ ನಾವು ಕುಳಿತ ಜಾಗದಲ್ಲೇ ಎಲ್ಲಾ ಮಾಹಿತಿಗಳು ನಮಗೆ ತಲುಪುತ್ತಿವೆ ಅದಕ್ಕೆ ಮುಖ್ಯ ಕಾರಣ ತಾಂತ್ರಿಕತೆ (technology) ಯಾಗಿದೆ. ರೈತರು ಬೆಳೆಗಳ ದರವನ್ನು ಮನೆಯಲ್ಲಿ ಕುಳಿತು ತಮ್ಮ ಆ್ಯಂಡ್ರಾಯ್ಡ ಮೊಬೈಲ್ ನಲ್ಲಿ ನೋಡಿಕೊಳ್ಳಬಹುದು. ಹೇಗೆ ನೋಡಬೇಕು ಎಂದು ಈ ಲೇಖನದಲ್ಲಿ ತಿಳಿಸಲಾಗಿದೆ.
ಆತ್ಮೀಯ ರೈತ ಭಾಂದವರೇ ನಮ್ಮ ಭಾರತ ದೇಶದಲ್ಲಿ ಕೃಷಿ ಬೆಳೆಗಳಲ್ಲಿ ವಾಣಿಜ್ಯ ಬೆಳೆಯಾಗಿ ಅಡಿಕೆಯನ್ನು ಬೆಳೆಯಲಾಗುತ್ತಿದೆ. ಅಡಿಕೆ ನಮ್ಮ ದೇಶದ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಮುಖ್ಯವಾಗಿ ಮಲೆನಾಡು, ಕರಾವಳಿ ಹಾಗೂ ಅರೆ ಮಲೆನಾಡು ಪ್ರದೇಶಗಳ ಭಾಗದ ರೈತರ ಜೀವನಾಡಿಯಾಗಿದೆ. ಅಡಿಕೆ ಬೆಳೆಯ ನಿಖರ ಆದಾಯ ಮತ್ತು ಉತ್ತಮ ಮಾರುಕಟ್ಟೆ ವ್ಯವಸ್ಥೆಯಿಂದಾಗಿ ಹೆಚ್ಚು ಹೆಚ್ಚು ರೈತರು ಅಡಿಕೆ ಕೃಷಿಯತ್ತ ಒಲವು ತೋರುತ್ತಿದ್ದಾರೆ.
ಅಡಿಕೆ ಬೆಳೆಯನ್ನು ಪ್ರಸ್ತುತ 4.76 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಬೆಳೆದು, 7.78 ಲಕ್ಷ ಟನ್ ಗಳಷ್ಟು ಉತ್ಪಾದನೆ ಮಾಡಲಾಗುತ್ತಿದೆ. ಕರ್ನಾಟಕ ರಾಜ್ಯವು ಅಡಿಕೆ ಬೆಳೆಯ ಕ್ಷೇತ್ರ ಹಾಗೂ ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ನಂತರದ ಸ್ಥಾನವನ್ನು ಕ್ರಮವಾಗಿ ಕೇರಳ ಹಾಗೂ ಅಸ್ಸಾಂ ರಾಜ್ಯಗಳು ಪಡೆದಿವೆ.
ಇತ್ತೀಚಿನ ದಿನಗಳಲ್ಲಿ ಅಡಿಕೆ ಬೆಳೆಯ ದರವು ಏರಿಳಿತ ಕಾಣುತ್ತಿದ್ದು ರೈತರಿಗೆ ಇದರಿಂದ ಕೆಲವು ಸಮಯ ನಷ್ಟ ಉಂಟಾಗುತ್ತಿದೆ. ಹಾಗಾಗಿ ರೈತರಿಗೆ ಮಾರುಕಟ್ಟೆಯ ದರ ತಿಳಿಯದೆ ನೇರ ಮಾರಾಟಕ್ಕೆ ತೆಗೆದುಕೊಂಡು ಹೋದಾಗ ರೈತರಿಗೆ ನಷ್ಟ ಆಗುವ ಸಾಧ್ಯತೆಗಳು ಹೆಚ್ಚಾಗಿ ಕಂಡು ಬರುತ್ತದೆ. ಈ ಸಮಸ‍್ಯೆಗೆ ರೈತರು ಮನೆಯಲ್ಲೇ ಕುಳಿತು ಮೊಬೈಲ್ ನಲ್ಲಿ ವಿವಿಧ ಮಾರುಕಟ್ಟೆಯ ಅಡಿಕೆ ದರ ತಿಳಿಯಲು ಇಲ್ಲಿದೆ ಲಿಂಕ್. https://www.mandiprices.com/arecanut-price/karnataka/puttur/new-variety.html
ಉತ್ತಮ ಇಳುವರಿಗೆ ರೈತರು ಮಾಡಬೇಕಾದ ಕಾರ್ಯಗಳು:
1)ಅಧಿಕ ಮಳೆ ಬೀಳುವ ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಆಗಷ್ಟ-ಸಪ್ಟಂಬರ್ ಅವಧಿಯಲ್ಲಿ 90*90*90 ಸೆಂ.ಮೀ. ಅಳತೆಯ ಗುಣಿಗಳನ್ನು 2.7*2.7 ಮೀ. ಅಂತರದಲ್ಲಿ ಸಸಿಗಳನ್ನು ನಾಟಿ ಮಾಡುವುದು ಸೂಕ್ತ.
2)ಪ್ರತಿ ಮರಕ್ಕೆ 15-20ಕೆ.ಜಿ ಕೊಟ್ಟಿಗೆ ಗೊಬ್ಬರವನ್ನು ಟ್ರೈಕೋಡರ್ಮಾ ಮತ್ತು ಸುಡೋಮೊನಾಸ್ ಜೈವಿಕ ಗೊಬ್ಬರಗಳೊಂದಿಗೆ ಮಿಶ್ರಣಮಾಡಿ ಮಣ್ಣಿಗೆ ಸೇರಿಸಬೇಕು.
3)1 ತಿಂಗಳ ನಂತರ ಫಲ ಬಿಡುವ ಪ್ರತಿ ಮರಕ್ಕೆ 100ಗ್ರಾಂ ಸಾರಜನಕ, 40ಗ್ರಾಂ ರಂಜಕ, 140ಗ್ರಾಂ ಪೋಟ್ಯಾಷ್ ರಾಸಾಯನಿಕ ಗೊಬ್ಬರವನ್ನು ಒದಗಿಸಬೇಕು. ಈ ಗೊಬ್ಬರವನ್ನು ಮೇ-ಜೂನ್ ತಿಂಗಳು ಮತ್ತು ಸೆಪ್ಟಂಬರ್ -ಅಕ್ಟೋಬರ್ ತಿಂಗಳಿನಲ್ಲಿ ಕೊಡಬೇಕು.
4)ಮುಂಗಾರಿನ ಮೊದಲು ಬಸಿಗಾಲುವೆಗಳಲ್ಲಿ ಬಿದ್ದಿರುವ ಮಣ್ಣನ್ನು ತೆಗೆದು ಹಾಕಿ ಮಳೆಗಾಲದಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ದಾರಿ ಮಾಡಿ ಅನೂಕೂಲವಾಗುತ್ತದೆ.
5)ಅಡಿಕೆ ತೋಟದಲ್ಲಿ ಬಿದ್ದಿರುವ ತ್ಯಾಜ್ಯವನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿ ಮರದ ಬುಡಕ್ಕೆ ಹಾಕುವುದರಿಂದ ಕಳೆ ನಿಯಂತ್ರಣ ಮಾಡಿದ ಹಾಗೆ ಮತ್ತು ಗಿಡಗಳಿಗೆ ಸಾವಯವ ಗೊಬ್ಬರ ನೀಡಿದ ಹಾಗೆ ಆಗುತ್ತದೆ.
6)ಮಲೆನಾಡು ಹಾಗೂ ಕರಾವಳಿ ಭಾಗದ ಅಡಿಕೆ ತೋಟದಲ್ಲಿ ಹೆಚ್ಚು ಮಳೆಯಾಗುವುದರಿಂದ ಕೊಳೆ ರೋಗದ ಹಾನಿಯಿಂದ ರೈತರಿಗೆ ಅಡಿಕೆ ಇಳುವರಿಯಲ್ಲಿ ಹೆಚ್ಚಿನ ನಷ್ಟ ಉಂಟಾಗುತ್ತಿದೆ. ಈ ರೋಗವನ್ನು ಹೋಗಲಾಡಿಸಲು ಮುಂಗಾರು ಪೂರ್ವದಲ್ಲಿ ಶೇ.1 ಬೋರ್ಡೋ ದ್ರಾವಣ ಸಿಂಪರಣೆ ಮಾಡಬೇಕು. ನಂತರ 25 ದಿನಗಳಲ್ಲಿ ಮತ್ತೊಮ್ಮೆ ಸಿಂಪರಣೆ ಮಾಡಬೇಕು.