Thursday, November 21, 2024

ARECANUT LEAF SPOT AND FERTILIZER-ಅಡಿಕೆ ಬೆಳೆಯಲ್ಲಿ ಎಲೆಚುಕ್ಕೆ ರೋಗದ ನಿರ್ವಹಣೆ ಹಾಗೂ ರಸಗೊಬ್ಬರ ಬಳಕೆ ಮಾಹಿತಿ.

ಅಡಿಕೆ ಮಲೆನಾಡಿನ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು ಲಕ್ಷಾಂತರ ಸಣ್ಣ ಮತ್ತು ಅತೀ ಸಣ್ಣ ರೈತರ ಜೀವನಾಧಾರವಾಗಿದೆ. ಅಡಿಕೆ ಉತ್ಪಾದನೆಯಲ್ಲಿ ಭಾರತವು ಪ್ರಪಂಚದಲ್ಲಿಯೇ ಮುಂಚೂಣಿಯಲ್ಲಿದ್ದು, 4.73 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗಿದ್ದು, 7.0 ಲಕ್ಷ ಟನ್‌ ಗಳಷ್ಟು ಅಡಿಕೆಯನ್ನು ಉತ್ಪಾದಿಸಲಾಗುತ್ತಿದೆ.

ಅಡಿಕೆ ಬೆಳೆಯನ್ನು ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದ್ದರು, ಅವುಗಳಿಗೆ ಬರುವ ಕೀಟ ಮತ್ತು ರೋಗಗಳ ನಿರ್ವಹಣೆ ಬಗ್ಗೆ ರೈತರಿಗೆ ಸರಿಯಾದ ಮಾಹಿತಿ ಕೊರತೆಯಿಂದ ಹಾನಿಯಾಗುತ್ತಿದೆ. ಅಡಿಕೆ ಬೆಳೆಯಲ್ಲಿ ಹೆಚ್ಚಾಗಿ ಕಂಡು ಬರುವ ರೋಗ ಹಾಗೂ ಕೀಟ, ಬಾಧೆಗಳೆಂದರೆ ಕೊಳೆ ರೋಗ, ಎಲೆಚುಕ್ಕೆ ರೋಗ, ಬೇರು ಹುಳ.

ಅಡಿಕೆ ಎಲೆಚುಕ್ಕೆ ರೋಗದ ನಿರ್ವಹಣೆ: ಈ ರೋಗವು ಸಾಮಾನ್ಯವಾಗಿ ಗಾಳಿಯಲ್ಲಿ ಹೆಚ್ಚಿನ ತೇವಾಂಶವಿದ್ದಾಗ ಕಂಡು ಬರುತ್ತದೆ. ಇದು ಗಾಳಿಯ ಮುಖಾಂತರ ಶಿಲೀಂಧ್ರಗಳಿಂದ ಹರಡುತ್ತದೆ. ಮಳೆಗಾಲದಲ್ಲಿ ಇದರ ಹರಡುವಿಕೆ ಜಾಸ್ತಿ ಇರುತ್ತದೆ. ಈ ರೋಗದ ತಗಲುವಿಕೆಯಿಂದ ಶೇ.60 ರಷ್ಟು ಇಳುವರಿ ಕಡಿಮೆಯಾಗುತ್ತದೆ.

ಇದನ್ನೂ ಓದಿ:ತೋಟಗಾರಿಕೆ ಇಲಾಖೆಯಲ್ಲಿ ಶೀಟ್‌ ಬಳಸಿ ನೀರು ಸಂಗ್ರಹ ಕೃಷಿ ಹೊಂಡ(ಕೆರೆ) ಮಾಡಿಕೊಳ್ಳುವರಿಗೆ ಸಬ್ಸಿಡಿ ನೀಡಲಾಗುತ್ತಿದೆ.

ರೋಗದ ಲಕ್ಷಣಗಳು:

1)ಸೋಗೆಗಳ ಗರಿಗಳ ಮೇಲೆ ಬೂದು ಮಿಶ್ರಿತ ಕಂದು ಬಣ್ಣದ ಚಿಕ್ಕ ಗಾತ್ರದ ಚುಕ್ಕೆಗಳು ಕಾಣಿಸಿಕೊಂಡು, ನಂತರ ದೊಡ್ಡದಾಗಿ ಕೂಡಿಕೊಂಡು ಪೂರ್ತಿ ಒಂದುಗೂಡಿ ಒಣಗಲು ಪ್ರಾರಂಭಿಸುತ್ತದೆ.

2)ಪ್ರಾರಂಭದ ಹಂತದಲ್ಲಿ ಈ ಚುಕ್ಕೆಗಳು ಕೆಳಗಿನ ಎಲೆಗಳಿಂದ ಪ್ರಾರಂಭವಾಗಿ ಶೀಘ್ರವಾಗಿ ಒಂದಕ್ಕೊಂದು ಕೂಡಿಕೊಂಡು ಪೂರ್ತಿ ಹೆಡೆಗಳನ್ನು ಆವರಿಸಿ, ಗರಿಗಳು ಸುಟ್ಟಂತೆ ಕಂಡು ಬರುತ್ತದೆ.

3)ರೋಗದ ತೀವ್ರತೆ ಹೆಚ್ಚಾದಾಗ ಹೆಡೆಗಳು ಒಣಗಿ, ಜೋತು ಬೀಳುತ್ತದೆ. ಆದುದರಿಂದ ಇಳುವರಿ ಕಡಿಮೆಯಾಗುತ್ತದೆ.

ರೋಗದ ಸಮಗ್ರ ನಿರ್ವಹಣೆ ಕ್ರಮಗಳು:

1)ಪ್ರತಿ ವರ್ಷ ಮುಂಗಾರಿನ ಮೊದಲು ಬಸಿಗಾಲುವೆಗಳ ಸಮರ್ಪಕ ನಿರ್ವಹಣೆ ಮಾಡುವುದರಿಂದ ಮಳೆಗಾಲದಲ್ಲಿ ಸರಾಗವಾಗಿ ಮಳೆ ನೀರು ಹರಿದು ಹೋಗಲು ನೆರವಾಗಿ, ರೋಗ ಹರಡುವುದನ್ನು ತಡೆಯುತ್ತದೆ.

2)ರೋಗ ಭಾದಿತ ಒಣಗಿದ ಗರಿಗಳನ್ನು ಕತ್ತರಿಸಿ ತೆಗೆದು ಒಂದೆಡೆ ಸುಟ್ಟು ನಾಶಪಡಿಸಬೇಕು. ಇದರಿಂದ ರೋಗ ಹರಡುವುದನ್ನು ಪರಿಣಾಮಕಾರಿಯಾಗಿ ತಡೆಯಬಹುದು.

3)ಮುಂಗಾರಿನ ಮೊದಲು ರೋಗವನ್ನು ತಡೆಗಟ್ಟಲು ಶೇ.1 ರ ಬೋರ್ಡೋ ದ್ರಾವಣ ಅಥವಾ ಶೇ.03ರ ತಾಮ್ರದ ಆಕ್ಸಿಕ್ಲೋರೈಡ್‌ ದ್ರಾವಣವನ್ನು ಗರಿಗಳಿಗೆ ಹಾಗೂ ಸಿಂಗಾರಕ್ಕೆ ಸಿಂಪಡಿಸಬೇಕು.

4)ರೋಗ ಲಕ್ಷಣದ ಮುಂಜಾಗ್ರತೆ ಕ್ರಮವಾಗಿ ಶಿಲೀಂಧ್ರನಾಶಕಗಳಾದ ಮ್ಯಾಂಕೋಜೆಬ್‌ (2.5 ಗ್ರಾಂ)ಅಥವಾ (ಕಾರ್ಬನ್‌ ಡೈಜಿಮ್ 2.0ಗ್ರಾಂ) ಜೊತೆಗೆ ಅಂಟು ದ್ರಾವಣ (1ಮಿ.ಲೀ) ಪ್ರತೀ ಲೀಟರ್‌ ನೀರಿನಲ್ಲಿ ಬೆರೆಸಿ ಗರಿಗಳಿಗೆ ಸಿಂಪಡಿಸಬೇಕು.

5)ರೋಗದ ತೀವ್ರತೆ ಹೆಚ್ಚಾದಾಗ ಹೆಕ್ಸಾಕೊನಾಜೋಲ್‌ ಅಥವಾ ಪ್ರೋಪಿಕೊನಾಜೋಲ್‌  ಶಿಲೀಂಧ್ರನಾಶಕಗಳನ್ನು 1ಮೀ.ಲಿ. ಪ್ರತಿ ಲೀಟರ್‌ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

ಇದನ್ನೂ ಓದಿ: ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ 10 ಸಾವಿರ ರೂ. ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ.

ಸಾವಯವ ಮತ್ತು ರಾಸಾಯನಿಕ ಗೊಬ್ಬರಗಳ ಬಳಕೆ:

1)ಮರಗಳ ಉತ್ತಮ ಬೆಳವಣಿಗೆಗೆ  ಪ್ರತಿ ಮರಕ್ಕೆ 20 ಕೆ.ಜಿ ಕೊಟ್ಟಿಗೆ ಗೊಬ್ಬರ ನೀಡಬೇಕು.

2)ಫಸಲು ನೀಡುವ ಪ್ರತಿ ಮರಕ್ಕೆ ಸಾರಜನಕ(UREA) 200 ಗ್ರಾಂ ಹಾಕಬೇಕು.

3)ಫಸಲು ನೀಡುವ ಪ್ರತಿ ಮರಕ್ಕೆ ರಂಜಕ(SSP)) 150ಗ್ರಾಂ ಹಾಕಬೇಕು.

4)ಫಸಲು ನೀಡುವ ಪ್ರತಿ ಮರಕ್ಕೆ ಪೋಟ್ಯಾಷ್‌(MOP) 250ಗ್ರಾಂ ಹಾಕಬೇಕು.

5)DAP ಪ್ರತಿ ಮರಕ್ಕೆ 200 ಗ್ರಾಂ ಹಾಕಬೇಕು.

ವಿಶೇಷ ಸೂಚನೆ: ಇದರ ಇನ್ನೂ ಹೆಚ್ಚಿನ ಮಾಹಿತಿಗೆ ನಿಮ್ಮ ತಾಲೂಕಿನಲ್ಲಿರುವ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿಯನ್ನು ಭೇಟಿ ಮಾಡಿ.

ಇತ್ತೀಚಿನ ಸುದ್ದಿಗಳು

Related Articles