ಭಾರತದಲ್ಲಿ ಸಸ್ಯಹಾರಿಗಳ ತುಂಬಾ ಜನಪ್ರಿಯ ಆಹಾರ ಪದಾರ್ಥವಾಗಿ ಅಣಬೆ ಪ್ರಸಿದ್ದವಾಗಿದೆ. ಹಾಗೂ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಆದ ಆಹಾರ ಪದಾರ್ಥವಾಗಿದೆ. ಇದನ್ನು ಹೆಚ್ಚಾಗಿ ಬಳಸುತ್ತಿದ್ದು ಇದರ ಉತ್ಪಾದನೆ ತುಂಬಾ ಕಡಿಮೆ ಆಗಿದೆ ಹಾಗೂ ಬೇಡಿಕೆ ತುಂಬಾ ಇದೆ. ನಗರ ಪ್ರದೇಶ ಜನರಿಗೆ ಅಣಬೆ ಊಟಕ್ಕೆ ಜನಪ್ರಿಯವಾಗಿದೆ.
ಪ್ರಪಂಚದಾದ್ಯಂತ 6 ಕ್ಕೂ ಹೆಚ್ಚು ಆಯಿಸ್ಟರ್ ಅಣಬೆ ಪ್ರಭೇದವನ್ನು ಬೆಳೆಯುತ್ತಾರೆ. ಈ ಅಣಬೆ ಸಮಶಿತೋಷ್ಣ ಪ್ರದೇಶ ಮತ್ತು ಉಷ್ಣವಲಯ ಪ್ರದೇಶದಲ್ಲಿ, ಕಾಡುಗಳಲ್ಲಿ ಸುತ್ತಮುತ್ತ ಕೊಳೆಯುತ್ತಿರುವ ಮರಗಳ ಮೇಲೆ ಬೆಳೆಯುತ್ತದೆ. ಆಯಿಸ್ಟರ ಅಣಬೆ ಕಪ್ಪೆ ಚಿಪ್ಪಿನ ಆಕಾರದಲ್ಲಿರುತ್ತದೆ. ಅಥವಾ ಅಗಲವಾದ ಚಾಕು ಆಕಾರ ಹೊಂದಿರುತ್ತದೆ. ಇದು ಬಿಳಿ, ಕೆನೆ, ಬೂದು, ಹಳದಿ, ತಿಳಿ ಕಂದು ಮತ್ತು ಗುಲಾಬಿ ಬಣ್ಣ ಹೊಂದಿದೆ.
ಅಣಬೆ ಬೆಳೆಯಲು ಬೇಕಾಗುವ ವಸ್ತುಗಳು:
ಆಯಿಸ್ಟರ್ ಅಣಬೆ ಬೆಳೆಯಲು ಬೇಕಾಗುವ ಕಚ್ಚಾ ಸಾಮಗ್ರಿಗಳು ಭತ್ತದ ಹುಲ್ಲು, ಗೋಧಿ ಹುಲ್ಲು, ರಾಗಿ ಹುಲ್ಲು, ಕಬ್ಬಿನ ರವದಿ, ಕೃಷಿ ತ್ಯಾಜ್ಯಗಳನ್ನು ಉಪಯೋಗಿಸಬಹುದು. ಹುಲ್ಲನ್ನು ಸಣ್ಣದಾಗಿ ಕತ್ತರಿಸಿಕೊಂಡು 2-3 ಘಂಟೆಗಳ ಕಾಲ ನೀರಿನಲ್ಲಿ ನೆನೆಸಬೇಕು. ಅಣಬೆ ಬೀಜ ಮತ್ತು ಹಾಳೆ ಹಾಗೂ ಮಂದ ಬೆಳಕಿನ ಕೋಣೆ ಬೇಕಾಗುತ್ತದೆ.
ಬಿಸಿ ನೀರಿನ ಮೂಲಕ ಪಾಶ್ಚರೀಕರಣ
ನೀರನ್ನು ದೊಡ್ಡ ಪಾತ್ರೆಯಲ್ಲಿ ಕುದಿಸಬೇಕು. ಹುಲ್ಲನ್ನು ನೇರವಾಗಿ ಅಥವಾ ಗೋಣಿಚೀಲದಲ್ಲಿ ತುಂಬಿಸಿ ಕುದಿಯುವ ನೀರಿನಲ್ಲಿ ಮುಳುಗಿಸಬೇಕು. ಸುಮಾರು 80-90 ಸೆಂಟಿಗ್ರೇಡ ತಾಪಮಾನದಲ್ಲಿ ಒಂದು ಗಂಟೆ ಬೇಯಿಸಬೇಕು.
ಬ್ಯಾಗ್ ಪದ್ಧತಿಯಲ್ಲಿ ತುಂಬಿಸುವುದು.
ಈ ಪದ್ಧತಿಯಲ್ಲಿ 12*18 ಅಥವಾ 14*14 ಅಳತೆಯ 150-200 ಗೇಜಿನ ಪಾಲಿಥೀನ್ ಬ್ಯಾಗನ್ನು ಹುಲ್ಲು ತುಂಬಲು ಬಳಸಲಾಗುತ್ತದೆ. ಹುಲ್ಲನ್ನು ಬ್ಯಾಗಿಗೆ ತುಂಬಿಸುವ ಮೊದಲು ಹುಲ್ಲಿನ ತೇವಾಂಶ ಶೇ.60-65 ಇರುವಂತೆ ನೋಡಿಕೊಳ್ಳಬೇಕು. ತಂಪಾದ ಮತ್ತು ಪಾಶ್ಚರೀಕರಿಸಿದ ಹುಲ್ಲನ್ನು ಬ್ಯಾಗಿಗೆ ತುಂಬಿಸಿ ಅದರ ಮೇಲೆ ಅಣಬೆ ಬೀಜವನ್ನು ಹಾಕಬೇಕು. ಪದರಗಳಲ್ಲಿ ಹುಲ್ಲನ್ನು ಹಾಕಿ ಪದರಗಳ ಮದ್ಯದಲ್ಲಿ ಅಣಬೆ ಬೀಜವನ್ನು ಹಾಕಬೇಕು. 1 ಕೆ.ಜಿ. ಪಾಶ್ಚರೀಕರಿಸಿದ ಹುಲ್ಲಿಗೆ 4-5 ಅಂದರೆ 40-50 ಗ್ರಾಂ ಅಣಬೆ ಬೀಜ ಹಾಕಬೇಕು. ಬ್ಯಾಗಿಗೆ ಹುಲ್ಲನ್ನು ತುಂಬಿಸಿ 4-5 ಪದರದಲ್ಲಿ ಬೀಜ ಮತ್ತು ಹುಲ್ಲನ್ನು ಹಾಕಬೇಕು. ನಂತರ ಪಾಲಿಥೀನ್ ಬ್ಯಾಗನ್ನು ರಬ್ಬರ್ ಅಥವಾ ದಾರದಿಂದ ಬಿಗಿಯಾಗಿ ಕಟ್ಟಬೇಕು.
ಅಣಬೆ ಬೆಳವಣಿಗೆ ಮತ್ತು ಕಾವು ಕೊಡುವುದು:
ಬ್ಯಾಗನ್ನು ಅಣಬೆ ಬೆಳೆಯುವ ಕೊಠಡಿಗೆ ತರಬೇಕು. ಬ್ಯಾಗಿನ ಸುತ್ತ 2. ಸೆಂ.ಮೀ. ವ್ಯಾಸದ ರಂಧ್ರಗಳನ್ನು ಮಾಡಬೇಕು. ಬ್ಯಾಗ್ ಗಳನ್ನು ನೈಲಾನ್ ದಾರದ ಸಹಾಯದಿಂದ ಒಂದರ ಕೆಳಗೆ ಒಂದರಂತೆ ಕಟ್ಟಿ ಛಾವಣಿಗೆ ನೇತು ಹಾಕಬಹುದು ಮತ್ತು ನೆಲದ ಮೇಲೆ 30 ಸೆಂ.ಮೀ. ಅಂತರದಲ್ಲಿ ಜೋಡಿಸಬೇಕು. ಈ ಹಂತದಲ್ಲಿ ತೇವಾಂಶವನ್ನು ಶೇ.80-85 ಹಾಗೂ ತಾಪಮಾನವನ್ನು 24-26 ಸೆಂಟಿಗ್ರೇಡ್ ಕಾಯ್ದುಕೊಳ್ಳಬೇಕು ಮತ್ತು ಕೊಠಡಿಯೊಳಗೆ ತಾಜಾ ಗಾಳಿ ಬರುವಂತೆ ಇರಬೇಕು. ಕೊಠಡಿಯೊಳಗೆ ಇಟ್ಟ 5-7 ದಿನಗಳಲ್ಲಿ ಅಣಬೆ ಕಾಣಿಸಿಕೊಳ್ಳುತ್ತದೆ. ಇವು ಮುಂದಿನ 2-3 ದಿನಗಳಲ್ಲಿ ದೊಡ್ಡದಾಗಿ ಬೆಳೆಯುತ್ತದೆ ಮತ್ತು ನಂತರ ಉತ್ತಮ ಆಕಾರದ ಮೃದುವಾದ ಅಣಬೆ ದೊರೆಯುತ್ತದೆ. ಮೊದಲ ಕಟಾವಿನ ನಂತರ ಮತ್ತೊಮ್ಮೆ 7-10 ದಿನಗಳಲ್ಲಿ ಅಣಬೆ 2ನೇ ಕಟಾವಿಗೆ ಸಿದ್ಧವಾಗುತ್ತದೆ.
ಆಯಿಸ್ಟರ್ ಅಣಬೆಯ ಆರೋಗ್ಯ ಪ್ರಯೋಜನಗಳು:
1)ರಕ್ತದೊತ್ತಡ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
2)ಆಸ್ಟಿಯೋಪೋರೋಸಿಸ್ ಮತ್ತು ಸಂಧಿವಾತವನ್ನು ತಡೆಯಲು ಸಹಾಯ ಮಾಡುತ್ತದೆ.
3)ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.
4)ರಕ್ತ ಹೀನತೆಯನ್ನು ತಡೆಯಲು ಸಹಾಯಕಾರಿ.
5)ಕ್ಯಾನ್ಸರ್ ವಿರುದ್ಧ ರಕ್ಷಿಸುತ್ತದೆ.
6)ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸುತ್ತದೆ.
7)ಕಡಿಮೆ ಕ್ಯಾಲೋರಿ ಮತ್ತು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.